ADVERTISEMENT

ಕೆರೆಗಳ ಒಡಲು ಸೇರುತ್ತಿರುವ ಪ್ಲಾಸ್ಟಿಕ್‌

ಸರ್ಕಾರದ ನೀತಿಗೆ ‘ನಿಷೇಧ’ದ ನೀತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ; ಜಲ ಮಾಲಿನ್ಯ ಉಂಟು ಮಾಡಿದ ಕೈಚೀಲಗಳು

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 10:38 IST
Last Updated 11 ಜೂನ್ 2018, 10:38 IST

ಬಂಗಾರಪೇಟೆ: ಪಟ್ಟಣದಲ್ಲಿ ಪ್ಲಾಸ್ಟಿಕ್ ಕೈಚೀಲಗಳು ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳು ಬಳಕೆ ಹೆಚ್ಚಾಗುತ್ತಿದೆ. ಆ ಕೈಚೀಲಗಳು ಚರಂಡಿ ಮೂಲಕ ಕೆರೆಗಳನ್ನು ಸೇರಿ ಜಲ ಮಾಲಿನ್ಯ ಉಂಟು ಮಾಡುತ್ತಿದೆ. ಅಲ್ಲದೆ ಪರಿಸರ ಕಲುಷಿತಗೊಳ್ಳುತ್ತಿದೆ.

40 ಮೈಕ್ರಾನ್‌ಗಿಂತ ಕಡಿಮೆ ದಪ್ಪ (ಥಿಕ್‌ನೆಸ್) ಪ್ಲಾಸ್ಟಿಕ್ ಕೈಚೀಲಗಳನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಪಟ್ಟಣದ ಎಲ್ಲೆಡೆ ಯಥೇಚ್ಚವಾಗಿ ಪ್ಲಾಸ್ಟಿಕ್ ಕೈಚೀಲ ಬಳಕೆಯಾಗುತ್ತಿದೆ.

ಪಟ್ಟಣದ ಬಜಾರು ರಸ್ತೆ ಮತ್ತು ಕೆಜಿಎಫ್ ಮುಖ್ಯ ರಸ್ತೆಯ ತರಕಾರಿ ಅಂಗಡಿಗಳು, ಗಾರ್ಮೆಂಟ್‌ಗಳ ಮುಂದಿನ ತರಕಾರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳು ಅತಿಯಾಗಿ ಬಳಕೆಯಾಗುತ್ತಿದೆ. ಮಾರಾಟಗಾರರು ಆರಂಭದಲ್ಲಿ ತರಕಾರಿಯನ್ನು ರಾಶಿ ಮಾಡಿ ಕಿಲೋ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು.

ADVERTISEMENT

ಗ್ರಾಹಕರು ಮನೆಯಿಂದ ತಂದ ಪ್ಲಾಸ್ಟಿಕೇತರ ಬ್ಯಾಗ್‌ಗಳಲ್ಲಿ ಕೊಂಡೊಯುತ್ತಿದ್ದರು. ಈಗ ಟೊಮೆಟೊ, ಸೇರಿದಂತೆ ಎಲ್ಲ ತರಕಾರಿಗಳನ್ನು ಅರ್ಧ ಅಥವಾ ಒಂದು ಕಿಲೋ ಗ್ರಾಂ ತೂಕ ಹಾಕಿ, ಪ್ಲಾಸ್ಟಿಕ್ ಕೈಚೀಲಗಳಲ್ಲಿ ಕಟ್ಟಿ ಮಾರಾಟ ಮಾಡುವ ಅಭ್ಯಾಸ ರೂಢಿಯಾಗಿದೆ.

ಪ್ಲಾಸ್ಟಿಕ್ ಬಳಕೆ ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಗ್ರಾಹಕರು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ಆದೇಶವಿದೆ ಎನ್ನುವ ಕಾರಣಕ್ಕೆ ಪುರಸಭೆ ಅಧಿಕಾರಿಗಳು ಒಂದೆರಡು ಬಾರಿ ಅಂಗಡಿಗಳ ಮೇಲೆ ದಾಳಿ ಮಾಡಿ ದಂಡ ವಿಧಿಸಿರುವುದು ಬಿಟ್ಟರೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.

ಹಾಗಾಗಿ ಪಟ್ಟಣದ ಚರಂಡಿ, ಖಾಲಿ ನಿವೇಶನ, ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾರಾಜಿಸುತ್ತಿದೆ. ಕೆಲವರು ಮನೆಯಲ್ಲಿ ಉಳಿಕೆಯಾದ ಆಹಾರ ಪದಾರ್ಥ ಮತ್ತು ತರಕಾರಿ ತ್ಯಾಜ್ಯವನ್ನು ಪ್ಲಾಸ್ಟಿಕ್ ಕೈಚೀಲದಲ್ಲಿ ಕಟ್ಟಿ ರಸ್ತೆ ಬದಿಗೆ ಎಸೆಯುತ್ತಿದಾರೆ.

ಪ್ಲಾಸ್ಟಿಕ್ ಚೀಲ ಬೇರ್ಪಡಿಸಿ ಸೇವಿಸಲಾಗದ ಹಸು, ಕುರಿಯಂತ ಮೂಕ ಪ್ರಾಣಿಗಳು ಜೀರ್ಣಿಸಿಕೊಳ್ಳಲಾಗದೆ ಅಸುನೀಗುತ್ತಿವೆ. ಮತ್ತೊಂದೆಡೆ ಮನುಷ್ಯರ ದೇಹದಲ್ಲೂ ಪ್ಲಾಸ್ಟಿಕ್ ಅಂಶ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಪುರಸಭೆ ಮನೆ ಮನೆಗೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದು, ಕಸ ಸಂಸ್ಕರಣೆ ಘಟಕ ಕೂಡ ತೆರೆಯಲಾಗಿದೆ. ಆದರೆ ಕಸ ಸಂಸ್ಕರಣೆ ಘಟಕದಲ್ಲಿನ ಕಸದ ರಾಶಿಗಳಿಗೆ ಬೆಂಕಿ ಹೊತ್ತಿಸಲಾಗುತ್ತಿದೆ ಎನ್ನುವುದು ಬ್ಯಾಡಬೆಲೆ ಗ್ರಾಮಸ್ಥರ ಆರೋಪ.

ಪ್ಲಾಸ್ಟಿಕ್ ಕೈಚೀಲ ಬಳಸುವ ಅಂಗಡಿಗಳ ಮೇಲೆ ಪುರಸಭೆ ದಂಡ ವಿಧಿಸುತ್ತಿದ್ದರೂ ಕೈ ಚೀಲದ ಬಳಕೆ ನಿಯಂತ್ರಣೆಗೆ ಬರುತ್ತಿಲ್ಲ. ಕೈಚೀಲ ಪಡೆಯುವ ಗ್ರಾಹಕರಿಗೂ ದಂಡ ವಿಧಿಸಿದರೆ ಮಾತ್ರ ಪ್ಲಾಸ್ಟಿಕ್ ಬಳಕೆ ನಿಯಂತ್ರಣೆಗೆ ಬರಲಿದೆ ಎನ್ನುವುದು ಬ್ಯಾಡಬೆಲೆ ಗ್ರಾಮಸ್ಥ ಸುಧಾಕರ್ ಅವರ ಒತ್ತಾಯ.

ದಾಳಿ ಎಚ್ಚರಿಕೆ

ಕಸ ಸಂಸ್ಕರಣ ಘಟಕದಲ್ಲಿ ಕಸದ ರಾಶಿಗೆ ಬೆಂಕಿ ಹಾಕುವುದಿಲ್ಲ. ಅಚಾನಕ್ಕಾಗಿ ಬಿಂಕಿ ಬಿದ್ದರೂ ನಂದಿಸುವ ವ್ಯವಸ್ಥೆಯಿದೆ. ಚುನಾವಣೆಯಿಂದಾಗಿ ಎರಡು ತಿಂಗಳು ಯಾವುದೇ ದಾಳಿ ನಡೆಸಲಾಗಿಲ್ಲ. ಮುಂದಿನವಾರ ಪ್ಲಾಸ್ಟಿಕ್ ಕೈಚೀಲ ಬಳಸುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದರು.

ಬಂಗಾರಪೇಟೆಯ ಚಿಕನ್, ಮಟನ್ ಅಂಗಡಿಗಳ ತ್ಯಾಜ್ಯ ಕಸ ಸಂಸ್ಕರಣ ಘಟಕದಲ್ಲಿ ಸುರಿಯಲಾಗುತ್ತಿದೆ. ಅದಕ್ಕೆ ಬೆಂಕಿ ಹೊತ್ತಿದ ಸಂದರ್ಭ ಬರುವ ಕೆಟ್ಟ ವಾಸನೆ ತಡೆಲಾಗುತ್ತಿಲ್ಲ
ಸುಧಾಕರ್, ಬ್ಯಾಡಬೆಲೆ ಗ್ರಾಮಸ್ಥ ‌

-ಕಾಂತರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.