ADVERTISEMENT

ತೆರೆದ ಬಾವಿ ಸಾಲ ಮನ್ನಾಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 3:50 IST
Last Updated 21 ಮಾರ್ಚ್ 2012, 3:50 IST

ಕೋಲಾರ: ತೆರೆದ ಬಾವಿಗಳನ್ನು ತೋಡಿಸಲು ಹಲವು ವರ್ಷಗಳ ಹಿಂದೆ 975 ರೈತರಿಗೆ ಸಹಕಾರಿ ಬ್ಯಾಂಕ್‌ಗಳು ನೀಡಿದ್ದ ಸಾಲವನ್ನು ಮನ್ನಾ ಮಾಡಬೇಕು ಎಂದು ಶ್ರೀನಿವಾಸಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ದಳಸನೂರು ಎಲ್. ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಅವರು, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತೆರೆದ ಬಾವಿಗಳನ್ನು ತೋಡಲು ಸುಮಾರು 25- 30 ವರ್ಷಗಳ ಹಿಂದೆ ಸಾಲ ನೀಡಲಾಗಿತ್ತು. ಆಗ 25- 30 ಅಡಿಗಳ ಆಳ ದಲ್ಲಿ ನೀರನ್ನು ಬಳಸಿ ರೈತರು ವ್ಯವಸಾಯ ಮಾಡುತ್ತಿದ್ದರು. ಈಗ ಅಂತರ್ಜಲ ಮಟ್ಟ ಸಾವಿರಾರು ಅಡಿಗೆ ಕುಸಿದಿದೆ. ತೆರದ ಬಾವಿಗಳು ಬತ್ತಿ, ಕಣ್ಮರೆಯಾಗುವೆ ಎಂದರು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1984ರಲ್ಲಿ ಮೂವರು ಸದಸ್ಯರ ಸರ್ಕಾರಿ ಅಧಿಕಾರಿಗಳ ಸಮಿತಿ ರಚಿಸಿತ್ತು. ಬಾವಿಗಳು ಬತ್ತಿರುವ ಬಗ್ಗೆ ಸಾಲದ ಫಲಾನುಭವಿಗಳು ಅರ್ಜಿ ಸಲ್ಲಿಸಿದ ನಂತರ, ಸಮಿತಿ ತನಿಖೆ ನಡೆಸಿ ವರದಿ ನೀಡಿದ ಬಳಿಕ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಹಲವು ಅರ್ಜಿ ಸಲ್ಲಿಸದ ರೈತರು ಮತ್ತು ಸಮಿತಿ ತನಿಖೆಗೆ ಸಕಾಲಕ್ಕೆ ಒಳಪಡದ ರೈತರ ಸಾಲ ಇನ್ನೂ ಮನ್ನಾ ಆಗಿಲ್ಲ ಎಂದು ಹೇಳಿದರು.

ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕೋಲಾರ- ಚಿಕ್ಕಬಳ್ಳಾಪುರ ಶಾಖೆಗಳಲ್ಲಿ ಸಾಲ ಪಡೆದಿರುವ 975 ಮಂದಿಯ ಸಾಲ ಮನ್ನಾ ಅರ್ಜಿಗಳನ್ನು ಕಳೆದ 2011ರ ಡಿಸೆಂಬರ್ ಅಂತ್ಯದ ವೇಳೆಗೆ ತಿರಸ್ಕರಿಸಲಾಗಿದೆ. ಅಸಲು ರೂ. 62.77 ಲಕ್ಷ, ಬಡ್ಡಿ ರೂ 73.54 ಲಕ್ಷ ಸೇರಿ ಒಟ್ಟು 1.36 ಕೋಟಿ ಸಾಲ  ಬಾಕಿ ಇದೆ.

ಈ ರೈತರಲ್ಲಿ 600 ಮಂದಿ ಸಾಲದ ಅವಧಿ ಮುಗಿದ ಬಳಿಕ ಅರ್ಜಿ ಸಲ್ಲಿಸಿರುವುದರಿಂದ ಅವರ ಅರ್ಜಿ ತಿರಸ್ಕರಿಸಲಾಗಿದೆ. ಉಪವಿಭಾಗಾಧಿಕಾರಿಗಳ ಆದೇಶವಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗದೆ ಉಳಿದಿರುವ ಹಿನ್ನೆಲೆಯಲ್ಲಿ 375 ರೈತರ ಸಾಲದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ಮತ್ತು ಚಿಕ್ಕಾಬಳ್ಳಾಪುರ, ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಲು ಮತ್ತು ಕೋಲಾರ ತಾಲ್ಲೂಕಿನಲ್ಲಿ ರೈತರು ಸಾಲ ಪಡೆದಿದ್ದಾರೆ.
 
ಸರ್ಕಾರದಿಂದ ಹಣ ಬಿಡುಗಡೆಯಾಗದ ಅರ್ಜಿಗಳು ಬಂಗಾರಪೇಟೆಯಲ್ಲಿ ಹೆಚ್ಚು (107) ಇವೆ.  ಸಾಲದ ಅವಧಿ ಮುಗಿದ ಬಳಿಕ ಅರ್ಜಿ ಸಲ್ಲಿಸಿರುವವರ ಪೈಕಿ ಶ್ರೀನಿವಾಸಪುರದಲ್ಲಿ ಹೆಚ್ಚು (109) ರೈತರಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನೀಲಕಂಠಗೌಡ, ಬ್ಯಾಟಪ್ಪ, ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.