ADVERTISEMENT

ನಾಳೆ ಮತ ಎಣಿಕೆ: ಸಕಲ ಸಿದ್ಧತೆ

ಮತ ಎಣಿಕೆ ಮತ್ತು ಭದ್ರತಾ ಕೊಠಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಸತ್ಯವತಿ

​ಪ್ರಜಾವಾಣಿ ವಾರ್ತೆ
Published 14 ಮೇ 2018, 10:24 IST
Last Updated 14 ಮೇ 2018, 10:24 IST

ಕೋಲಾರ: ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು, ಮತಗಳ ಎಣಿಕೆ ಕಾರ್ಯಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸಜ್ಜುಗೊಳಿಸಲಾಗಿದೆ. ಎಣಿಕೆ ಮೇ 15ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದ್ದು ಬೆಳಿಗ್ಗೆ 11ಕ್ಕೆ ಫಲಿತಾಂಶ ಹೊರ ಬೀಳಲಿದೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೊಠಡಿ ಮತ್ತು ಭದ್ರತಾ ಕೊಠಡಿಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಸತ್ಯವತಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಕೆಜಿಎಫ್‌ ಹಾಗೂ ಕೋಲಾರ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು. ಈಗಾಗಲೇ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ಮತಗಳ ಎಣಿಕೆ ಕೇಂದ್ರಕ್ಕೆ ಬರುವ ಏಜೆಂಟರು ಮತ್ತು ಅಧಿಕಾರಿಗಳನ್ನು ಗುರುತಿನ ಚೀಟಿ ಆಧಾರದ ಮೇಲೆ ಪ್ರವೇಶ ನೀಡಲಾಗುವುದು. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕ ಕ್ರಮವಾಗಿ ಸುತ್ತಲೂ 100 ಮೀಟರ್ ವ್ಯಾಪ್ತಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

‘ಮತ ಎಣಿಕಾ ಕಾರ್ಯ ಸುಗಮವಾಗಿ ಮತ್ತು ಸುಸೂತ್ರವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾ
ಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್ ತಿಳಿಸಿದ್ದಾರೆ.

‘ಭದ್ರತೆ ಕಾಪಾಡುವ ಹಿನ್ನಲೆಯಲ್ಲಿ ಎಸ್ಪಿ 2, ಎಎಸ್ಪಿ 1, ಡಿವೈಎಸ್ಪಿ 3,ಸಿಪಿಐ 20 , ಪಿಎಸ್‍ಐ 35, ಎಎಸ್‍ಐ 60, ಅರೆಸೇನಾ ಪಡೆ 150, ಹೋಂ ಗಾರ್ಡ್ 150, ಮಹಿಳಾ ಪೇದೆ ಸೇರಿದಂತೆ ಒಟ್ಟು ಭದ್ರತೆಗೆ 500 ಮಂದಿಯನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಮತ ಎಣಿಕಾ ಕೇಂದ್ರದ ಸುತ್ತಲೂ ಕಟಕಟೆಯನ್ನು ನಿರ್ಮಿಸಲಾಗಿದೆ. ಜೂನಿಯರ್ ಕಾಲೇಜು, ಸರ್ವಜ್ಞ ಉದ್ಯಾನವರೆಗೆ ನಿರ್ಮಿಸಿ ಬಿಗಿ ಪೋಲಿಸ್ ವ್ಯವಸ್ಥೆ ಮಾಡಲಾಗುವುದು. ಎಣಿಕಾ ಕಾರ್ಯಕ್ಕೆ ಬರುವ ಅಭ್ಯರ್ಥಿಗಳ ಪರ ಏಜೆಂಟರು, ಎಣಿಕಾ ಕಾರ್ಯದ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ತರಬೇಕು. ಇಲ್ಲವಾದರೆ ಪ್ರವೇಶ ನೀಡುವುದಿಲ್ಲ. ಒಟ್ಟಾರೆ ಮತ ಎಣಿಕಾ ಕಾರ್ಯವು ಸುಗಮವಾಗಿ ಮತ್ತು ಸುಸೂತ್ರವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.