ADVERTISEMENT

ನೀರಾವರಿ: ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 5:55 IST
Last Updated 14 ಫೆಬ್ರುವರಿ 2012, 5:55 IST

ಮುಳಬಾಗಲು: ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಲು ಡಾ.ಪರಮಶಿವಯ್ಯ ವರದಿ ಅನುಷ್ಠಾನಗೊಳಿಸಲು ಹಾಗೂ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ಅಬ್ಬಣಿ ಶಿವಪ್ಪ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ಮಾತನಾಡಿ, ಡಾ.ಪರಮಶಿವಯ್ಯ ವರದಿ ಜಾರಿಗೆ ತರುವುದಾಗಿ ಹೇಳಿಕೆ ನೀಡಿ, ಮತ್ತೊಂದು ಕಡೆ ಯರ‌್ರಗೋಳ್‌ಎತ್ತಿನಹೊಳೆ ಯೋಜನೆ ಜಾರಿಗೆ ತರುತ್ತೇನೆಂಬ ಗೊಂದಲಮಯ ಹೇಳಿಕೆಯನ್ನು ಮುಖ್ಯಮಂತ್ರಿಗಳು ನೀಡುತ್ತಿರುವುದು ಶೋಚನೀಯ ಎಂದರು. ಜಿಲ್ಲೆಯಲ್ಲಿ ಆರು ಶಾಸಕರಿದ್ದು, ಪರಮಶಿವಯ್ಯ ವರದಿ ಬಗ್ಗೆ ಚಕಾರವೆತ್ತದ ಶಾಸಕರ ಧೋರಣೆ ಬಗ್ಗೆ ಕಿಡಿ ಕಾರಿದರು. 

ಮುಖಂಡ ವೀರಭದ್ರಸ್ವಾಮಿ, ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಇದಕ್ಕೆ ಮರಳು ಮಾಫಿಯಾ ಕಾರಣ ಎಂದರು.

ಪ್ರತಿ ತಾಲ್ಲೂಕಿನಿಂದ 5 ಸಾವಿರ ಜನ ಕಾಲ್ನಡಿಗೆ ಜಾಥಾ  ರೂಪಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಹಾಗೂ ಶಾಸಕರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲಾ ಸಹ ಸಂಚಾಲಕ ಬಿಸನಹಳ್ಳಿ ಬಚ್ಚೇಗೌಡ, ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎಂ. ವೆಂಕಟೇಶ್‌ಗೌಡ, ಕೋಟಿಗಾನಹಳ್ಳಿ ಗಣೇಶ್‌ಗೌಡ, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಹಾಗೂ ತಾಲ್ಲೂಕು ಗೌರವಾಧ್ಯಕ್ಷ ಬಿ.ವಿ.ರಮೇಶ್ ಗುಜ್ಜನಹಳ್ಳಿ, ಅಧ್ಯಕ್ಷ ಮರಕಲಘಟ್ಟ ಎಂ.ಎಸ್.ಚನ್ನಕೇಶವ, ಕಾರ್ಯಾಧ್ಯಕ್ಷ ಶಿವರಾಜ್,  ಕಾರ್ಯದರ್ಶಿ ರಮೇಶ್‌ಕುಮಾರ್, ಖಜಾಂಚಿ ಕೊತ್ತಮೀರಿ ಕುಮುದೇನಹಳ್ಳಿ ಜಿ.ಮಂಜುನಾಥ್, ಉಪಾಧ್ಯಕ್ಷ ಎಂ.ಹರೀಶ್, ಎ.ಚಲಪತಿ, ಮುಳಬಾಗಲು ಶ್ರೀನಿವಾಸ್  ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.