ADVERTISEMENT

ನೀರಾವರಿ ಯೋಜನೆ ಅನುಷ್ಠಾನಕ್ಕೆ ಧರಣಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:20 IST
Last Updated 13 ಜುಲೈ 2012, 9:20 IST

ಬಂಗಾರಪೇಟೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಅಂಬೇಡ್ಕರ್ ಪ್ರತಿಮೆ ಮುಂದೆ ಧರಣಿ ನಡೆಸಿದರು.

ಕೋಲಾರ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಆಗಿದ್ದು, ಜನ, ಜಾನುವಾರು ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಪದೇಶದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೆಲವು ಕಡೆ 1200 ಅಡಿ ಕೊಳವೆ ಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ.

ನೀರಿಲ್ಲದೆ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ಪರಿಣಾಮ ಆಹಾರ ಪದಾರ್ಥಗಳ ಬೆಲೆ ದಿನೇ ದಿನೇ ಏರುತ್ತಿದ್ದು, ಸಾಮಾನ್ಯ ಜನರು ತೊಂದರೆ ಅನುಭವಿಸುವಂತೆ ಆಗಿದೆ. ಸತತವಾಗಿ 10 ವರ್ಷಗಳಿಂದ ಸರಾಸರಿ ಮಳೆ ಕಡಿಮೆಯಾಗುತ್ತಾ ಬಂದಿದ್ದು, ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ರೈತರ ಬದಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಯರಗೋಳು ಜಲಾಶಯ ನಿರ್ಮಿಸುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಯೋಜನೆ ಪ್ರಾರಂಭವಾಗಿ ಆರೇಳು ವರ್ಷ ಕಳೆದರೂ ಜಲಾಶಯದ ಕಾಮಗಾರಿ ಸಂಪೂರ್ಣವಾಗಿ ನಡೆದಿಲ್ಲ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟದಿಂದ ಸುಮಾರು 900 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಈ ನೀರು ಕಾಲುವೆ ಮೂಲಕ ಹರಿಸಿದರೆ ಸಮಾರು ಏಳು ಜಿಲ್ಲೆಯ 34 ತಾಲ್ಲೂಕುಗಳಿಗೆ ನೀರು ಪೂರೈಸಬಹುದು ಎಂದು ಡಾ.ಪರಮಶಿವಯ್ಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಈ ಬಗ್ಗೆ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯರಗೋಳು ಯೋಜನೆ ಶೀಘ್ರ ಪೂರ್ಣಗೊಳಿಸಿ, ಡಾ.ಪರಮಶಿವಯ್ಯ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡರಾದ ಎಸ್.ಅರ್.ಸಂಜೀವಪ್ಪ, ಅಶೋಕ್, ಬಿಆರ್‌ಎಸ್ ಮುಖಂಡರಾದ ಗುಟ್ಟಹಳ್ಳಿ ರವಿಕುಮಾರ್, ಮಧುಚಂದ್ರ, ಶೇಖರ್, ಎಂ.ಎನ್.ಭಾರದ್ವಾಜ್, ಬಾಲಕೃಷ್ಣ, ಅಸ್ಗರ್, ಆನಂದ್, ವಿಜಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.