ಬಂಗಾರಪೇಟೆ: ತಾಲ್ಲೂಕಿನ ಜನತೆಗೆ ಶುದ್ಧ ನೀರು ಒದಗಿಸುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧೆಡೆ ನೀರು ಶುದ್ಧೀಕರಣ ಘಟಕಗಳನ್ನು ತೆರೆಯಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇಲ್ಲಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿ, ಏಳು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಅನುದಾನ ಮಂಜೂರು ಮಾಡಿದೆ. ತೀರ ಅಗತ್ಯ ಇರುವ ಕಡೆ ಘಟಕಗಳನ್ನು ಅಳವಡಿಸಲಾಗುವುದು. ನಂತರ ಎ್ಲ್ಲಲ ಪಂಚಾಯಿತಿಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ತಾಲ್ಲೂಕಿನ ಮಾರ್ಕಂಡಯ್ಯ ಜಲಾಶಯ ಅಭಿವೃದ್ಧಿಗೆ 1.10 ಕೋಟಿ ಬಿಡುಗಡೆಯಾಗಿದೆ. ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಜಿಲ್ಲೆಯ ಹೊಳಲಿ, ಬೇತಮಂಗಲ ಕೆರೆಗಳನ್ನು ಕುಡಿಯುವ ನೀರಿಗಾಗಿ ಮೀಸಲಿಡಲಾಗಿದ್ದು, ಅವುಗಳ ಅಭಿವೃದ್ಧಿಗೆ ರೂ 4.30 ಕೋಟಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗಿದೆ.
ವರ್ತೂರು ಕೆರೆ ಕೋಡಿ ನೀರನ್ನು ತಾಲ್ಲೂಕಿನ ಮಾರ್ಕಂಡಯ್ಯ, ಕಾಮಸಮುದ್ರ ಇತರೆ ಕೆರೆಗಳಿಗೆ ಹರಿಸಲಾಗುವುದು. ಆ ಮೂಲಕ ಅಂತರ್ಜಲ ವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ತಿಳಿಸಿದರು.
ಯರಗೋಳು ಜಲಾಶಯದಿಂದ ಭೂಮಿ ಕಳೆದುಕೊಳ್ಳುವವರಿಗೆ 10 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗಿದ್ದು, ಅಣೆಕಟ್ಟು ಕಟ್ಟಲು ಇರುವ ತೊಡಕುಗಳನ್ನು ನಿವಾರಿಸಿ 20 ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಪಟ್ಟಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರೂ.35 ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಮಿನಿ ವಿಧಾನಸೌದ ಕಾಮಗಾರಿ ಕೊನೆ ಹಂತದಲ್ಲಿದ್ದು, 1.75 ಕೋಟಿ ವೆಚ್ಚದಲ್ಲಿ ಸುತ್ತುಗೋಡೆ ನಿರ್ಮಿಸಿ ಸೆಪ್ಟಂಬರ್ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿಗೆ 12 ಕೋಟಿ ಮಂಜೂರಾಗಿದ್ದು ನಾಲ್ಕು ದಿನದಲ್ಲಿ ಕಾಮಗಾರಿ ಶುರುವಾಗಲಿದೆ. ಕದರಿನೆತ್ತ ರಸ್ತೆ, ಮೂತನೂರಿನಿಂದ ತಮಿಳು ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಕಾಮಗಾರಿ ಆರಂಭಿಸಲಾಗುವುದು. ವಸತಿ ಯೋಜನೆಯಡಿ ಎಂಟು ಸಾವಿರ ಮನೆ ನೀಡಲು ಪ್ರಯತ್ನ ನಡೆಸಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅ.ಮು.ಲಕ್ಷ್ಮಿನಾರಾಯಣ, ನಾರಾಯಣರೆಡ್ಡಿ, ಮುಖಂಡ ರಾಧಾಕೃಷ್ಣ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಶಂಶುದ್ದೀನ್ ಬಾಬು, ಕೆ.ಚಂದ್ರಾರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.