ADVERTISEMENT

ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 9:30 IST
Last Updated 12 ಜನವರಿ 2012, 9:30 IST

ಕೋಲಾರ: ನಗರದಲ್ಲಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಮತ್ತೆ ಬ್ಯಾಲಹಳ್ಳಿ ಶಂಕರೇಗೌಡ ಮತ್ತು ವರ್ತೂರು ಬಣದ ನಡುವೆ ಸಂಘರ್ಷ ಸೃಷ್ಟಿಸಿದೆ.

ತಮ್ಮನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ಆದೇಶವನ್ನು ರದ್ದುಗೊಳಿಸಿದ ಸಹಕಾರಿ ಇಲಾಖೆಯ ಕಾರ್ಯದರ್ಶಿಗಳ ಆದೇಶ ಮತ್ತು ಅನುಚರರೊಡನೆ ಬುಧವಾರ ಬ್ಯಾಂಕಿಗೆ ಬಂದ ಶಂಕರೇಗೌಡರು ತಾವೇ ಅಧ್ಯಕ್ಷರು ಎಂದು ಪ್ರತಿಪಾದಿಸಿದ್ದು ವಿವಾದವನ್ನು ಹುಟ್ಟುಹಾಕಿದೆ. ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದೆ.

ಆದೇಶವು ನಿರ್ದೇಶಕ ಸ್ಥಾನಕ್ಕೆ ಅನ್ವಯಿಸುತ್ತದೆಯೇ ಹೊರತು ಅಧ್ಯಕ್ಷ ಸ್ಥಾನಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರೂ ಶಂಕರೇಗೌಡರು ಅಧ್ಯಕ್ಷರ ಕೊಠಡಿಗೆ ತೆರಳಿ ಹಾಲಿ ಅಧ್ಯಕ್ಷ ಮುನಿನಾರಾಯಣಪ್ಪನವರ ಹೆಸರುಳ್ಳ ಫಲಕವನ್ನು ತೆರವು ಮಾಡಿದ್ದಾರೆ. ತಮ್ಮಿಂದ ಪತ್ರಗಳಿಗೆ, ಚೆಕ್‌ಗೆ ಸಹಿ ಮಾಡಿಸಿಕೊಂಡಿದ್ದಾರೆ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಬ್ಯಾಂಕ್ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡುವಲ್ಲಿಗೆ ದಿನದ ಪ್ರಕರಣ ಕೊನೆಗೊಂಡಿದೆ.

ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಶಂಕರೇಗೌಡರು, ಅನುಚರರು ಆದೇಶವನ್ನು ತೋರಿಸಿ ತಾವೇ ಅಧ್ಯಕ್ಷರು ಎಂದು ಪ್ರತಿಪಾದಿಸಿದರು. ಅವರ ಬೆಂಬಲಿಗರು ಪಟಾಕಿ ಸಿಡಿಸಿದರು. ಇನ್ನು ಮುಂದೆ ಬ್ಯಾಂಕ್‌ನ ಸಿಬ್ಬಂದಿ ತಾವು ಹೇಳಿದಂತೆ ಕೇಳಬೇಕು ಎಂದು ಸೂಚಿಸಿದರು.

ಅವರು ಸ್ಥಳದಿಂದ ತೆರಳಿದ ಬಳಿಕ ವಿಷಯ ತಿಳಿದು ಬಂದ ವರ್ತೂರು ಬಣದ, ಬ್ಯಾಂಕ್ ಅಧ್ಯಕ್ಷ ಮುನಿನಾರಾಯಣಪ್ಪ, ನಗರಸಭೆ ಸದಸ್ಯರಾದ ವಿ.ಕೆ.ರಾಜೇಶ್, ಸೋಮಶೇಖರ್, ಮಧುಸೂದನಕುಮಾರ್, ವಿ.ಪ್ರಕಾಶ್ ಮತ್ತಿತರರು ಘಟನೆಯನ್ನು ಖಂಡಿಸಿದರು.
 
ನಂತರ ಅವರ ಬೆಂಬಲಿಗರೂ ಪಟಾಕಿ ಸಿಡಿಸಿದರು. ಮುನಿನಾರಾಯಣಪ್ಪ ಅವರನ್ನು ಹೊತ್ತು ಮೆರವಣಿಗೆ ನಡೆಸಿದರು. ಮುನಿನಾರಾಯಣಪ್ಪ ನೇತೃತ್ವದಲ್ಲಿಯೇ ಕಾರ್ಯದರ್ಶಿ ಮಂಜುನಾಥ್ ದೂರನ್ನು ಸಿದ್ಧಪಡಿಸಿ ಗಲ್‌ಪೇಟೆ ಠಾಣೆಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.