ADVERTISEMENT

ಪೇಪರ್ ಹಾಸು: ತೋಟಗಾರಿಕೆಯಲ್ಲಿ ಹೊಸ ಗಾಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 10:50 IST
Last Updated 15 ಮಾರ್ಚ್ 2012, 10:50 IST

ಶ್ರೀನಿವಾಸಪುರ: ತಾಲ್ಲೂಕಿನ ರೈತರು ತಡವಾಗಿಯಾದರೂ ವೈಜ್ಞಾನಿಕ ಕೃಷಿ ವಿಧಾನ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅಂತರ್ಜಲ ಮತ್ತು ಕೃಷಿ ಕಾರ್ಮಿಕರ ಕೊರತೆ, ರಾಸಾಯನಿಕ ಗೊಬ್ಬರಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಆಗುತ್ತಿರುವ ಅಪಾಯ ಅವರನ್ನು ವೈಜ್ಞಾನಿಕ ಕೃಷಿ ಕೈಗೊಳ್ಳಲು ಪ್ರೇರೇಪಿಸಿದೆ.

ಈ ಹಿಂದೆ ಟ್ರಾಕ್ಟರ್ ಉಳುಮೆಯನ್ನೇ ವೈಜ್ಞಾನಿಕ ಕೃಷಿ ಎಂದು ತಿಳಿಯಲಾಗಿತ್ತು. ಆದರೆ ಕೃಷಿಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ ಅದಕ್ಕಿಂತ ಭಿನ್ನವಾದ ದೃಷ್ಟಿಕೋನ ಬೆಳೆಯುತ್ತಿದೆ. ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ ಅದರ ಸಾಧಕ ಬಾಧಕ ಬಗ್ಗೆ ಚಿಂತನೆ ಆರಂಭವಾಗಿದೆ. ಅದರ ಪರಿಣಾಮ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸುವ ರೈತರ ಸಂಖ್ಯೆ ಹೆಚ್ಚುತ್ತಿದೆ.

ದೊಣ್ಣೆ ಮೆಣಸಿನ ಕಾಯಿ, ಕೋಸು. ಟೊಮೆಟೊ ಮುಂತಾದ ಸೂಕ್ಷ ಬೆಳೆಗಳನ್ನು ಬೆಳೆಯುವ ಮುನ್ನ ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ನೀಡಿ, ಹನಿ ನೀರಾವರಿಯನ್ನು ಅಳವಡಿಸಿ ಏರುಮಾಡಿದ ನೆಲಕ್ಕೆ ವಿಶೇಷವಾದ ಪ್ಲಾಸ್ಟಿಕ್ ಹಾಳೆ ಹಾಸಿ, ನಿಗದಿತ ಅಂತರದಲ್ಲಿ ಪ್ಲಾಸ್ಟಿಕ್ ಹಾಳೆಗಳಿಗೆ ರಂಧ್ರ ಮಾಡಿ ಸಸಿಗಳನ್ನು ನಾಟಿ ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ.

ಪ್ಲಾಸ್ಟಿಕ್ ಹಾಳೆಗಳನ್ನು ನೆಲಕ್ಕೆ ಹಾಸುವುದರಿಂದ ಕಳೆ ಬರುವುದಿಲ್ಲ. ಕಳೆ ನಿಯಂತ್ರಣದಿಂದ ಕಳೆ ತೆಗೆಯಲು ವ್ಯಯಿಸಬೇಕಾದ ಹಣ ಉಳಿತಾಯವಾಗುತ್ತದೆ. ಕೃಷಿ ಕಾರ್ಮಿಕರ ಕೊರತೆ ಇರುವ ಈ ದಿನಗಳಲ್ಲಿ ಈ ವಿಧಾನ ಹೆಚ್ಚು ಸೂಕ್ತ. ಕಳೆ ಇಲ್ಲದಿರುವುದರಿಂದ ಗೊಬ್ಬರದ ಸಾರ ನೇರವಾಗಿ ಬೆಳೆಗೆ ಸಿಗುತ್ತದೆ. ನೆಲದಲ್ಲಿ ತೇವಾಂಶ ಕಡಿಮೆಯಾಗದಂತೆ ಪ್ಲಾಸ್ಟಿಕ್ ಹಾಳೆ ತಡೆಯುತ್ತದೆ. ಕೆಲವೊಮ್ಮೆ ಅಧಿಕ ಮಳೆಯಿಂದ ನೆಲದಲ್ಲಿ ತೇವಾಂಶ ಹೆಚ್ಚಿ ಬೆಳೆ ಹಾಳಾಗುವುದು ತಪ್ಪುತ್ತದೆ. ಮಳೆ ನೀರು ಪ್ಲಾಸ್ಟಿಕ್ ಹಾಳೆ ಮೇಲೆ ಪಕ್ಕಕ್ಕೆ ಹರಿದು ಕಾಲುವೆ ಸೇರಿ ತೋಟದಿಂದ ಹೊರಗೆ ಹರಿದುಹೋಗುತ್ತದೆ. ರಾಸಾಯನಿಕ ಗೊಬ್ಬರವನ್ನು ಹನಿ ನೀರಾವರಿ ಮೂಲಕವೇ ಬೆಳೆಗೆ ಒದಗಿಸಬಹುದಾಗಿದೆ ಎಂಬುದು ಪ್ರಗತಿಪರ ರೈತ ನಂಜುಂಡಗೌಡ ಅವರ ಅನುಭವದ ಮಾತು.

ವೈಜ್ಞಾನಿಕ ಕೃಷಿ ವಿಧಾನದಿಂದ ಗೊಬ್ಬರದ ಅಪವ್ಯಯ ತಪ್ಪಿ ಬೆಳೆ ಹುಲುಸಾಗಿ ಬೆಳೆಯಲು ಮತ್ತು ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ. ಉತ್ತಮ ಫಸಲು ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಸಾಂಪ್ರದಾಯಿಕ ಕೃಷಿ ವಿಧಾನ ಬಂಡವಾಳ ರಹಿತ ಬೆಳೆ ಬೆಳೆಯಲಾಗುತ್ತಿದ್ದ ಕಾಲಕ್ಕೆ ಸೂಕ್ತವೆನಿಸಿತ್ತು. ಆದರೆ ಈಗಿನ ಕೃಷಿ ಅಧಿಕ ಬಂಡವಾಳವನ್ನು ಬಯಸುವುದರಿಂದ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ತಾಲ್ಲೂಕಿನಲ್ಲಿ ಮಾತ್ರವಲ್ಲದೆ ಇತರ ತಾಲ್ಲೂಕುಗಳಲ್ಲೂ ಈ ಪದ್ಧತಿ ಕಂಡುಬರುತ್ತಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.