ADVERTISEMENT

ಪ್ರಾಣ ಬೆದರಿಕೆ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 6:23 IST
Last Updated 10 ಜನವರಿ 2014, 6:23 IST

ಬಂಗಾರಪೇಟೆ: ಪಟ್ಟಣದ ವರ್ತಕರ ಗೋದಾಮಿನಲ್ಲಿ ಅಕ್ರಮವಾಗಿ ಶೇಖರಿ­ಸಿದ್ದ ಅಕ್ಕಿ ದಾಸ್ತಾನು ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ಶಾಸಕರ ಬೆಂಬಲಿಗರು ರೈತಸಂಘದ ಮುಖಂಡರ ಮೇಲೆ ಇಲ್ಲಸಲ್ಲದ ಆಪಾದನೆ ಹೊರಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನಾ ರ್‍್ಯಾಲಿ ನಡೆಸಿದರು.

ಪಟ್ಟಣದ ಭಾರತ್‌ ಟ್ರೇಡಿಂಗ್‌ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ವಿಷಯದ ಬಗ್ಗೆ ಅಧಿಕಾರಿಗಳಿಗೆ ತಿಳಿಸ­ಲಾಗಿತ್ತು. ದಾಸ್ತಾನು ಪರಿಶೀಲಿಸಿದ ಅಧಿಕಾರಿಗಳು ಮೇಲ್ನೋಟಕ್ಕೆ ಪಡಿತರ ಅಕ್ಕಿ ಎಂದು ಕಂಡುಬಂದಿದ್ದರಿಂದ ಗೋದಾಮಿಗೆ ಬೀಗ ಮುದ್ರೆ ಹಾಕಿದ್ದರು.

ಈ ಹಿನ್ನೆಲೆಯಲ್ಲಿ ವರ್ತಕರಲ್ಲದ ಶಾಸಕರ ಬೆಂಬಲಿಗರಾದ ಚಂದ್ರಯ್ಯ­ಶೆಟ್ಟಿ, ಚಂದ್ರಾರೆಡ್ಡಿ, ಶಂಶುದ್ದೀನ್‌ ಬಾಬು ರೈತ ಸಂಘದ ಮುಖಂಡರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅಕ್ರಮ ದಾಸ್ತಾನು ಪ್ರಕರಣ ತಿರುಚಿ, ರಾಜಕೀಯ ಲಾಭಕ್ಕಾಗಿ ಅಕ್ಕಿ ದಂಧೆ ನಡೆಸುವರ ಪರ ನಿಂತಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ವರ್ತಕರ ಗೋದಾಮುಗಳ ಮೇಲೆ ದಾಳಿ ನಡೆಸಿದರೆ ಟನ್‌ಗಟ್ಟಲೆ ಅಕ್ರಮ ಅಕ್ಕಿ ದಾಸ್ತಾನು ಪತ್ತೆಯಾಗು­ತ್ತದೆ. ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಶಾಸಕರು ಅಧಿಕಾರ ಉಪಯೋಗಿಸಿ, ಠಾಣೆಯಲ್ಲಿ ಪ್ರಕರಣ ಹಾಕಿಸಿದ್ದಾರೆ ಎಂದು ಅವರು ದೂರಿದರು.

ರೈತ ಸಂಘದ ಮುಖಂಡ ರಮೇಶ್‌ ಮಾತನಾಡಿ, ಶಾಸಕರು ರೈತ ಚಳ­ವಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದರು.

ತಾಲ್ಲೂಕಿನ ಗೋಮಾಳ, ಗುಂಡು­ತೋಪು, ಕೆರೆ ಅಂಗಳ ಪ್ರದೇಶಕ್ಕೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸ­ಲಾಗುತ್ತಿದೆ. ಇಂಥ ಕೃತ್ಯಗಳ ವಿರುದ್ಧ ಹೋರಾಟ ನಡೆಸುವ ಹೋರಾಟಗಾರರಿಗೆ ಪ್ರಾಣ ಬೆದರಿಕೆ ಹಾಕುವ ಯತ್ನಗಳು ನಡೆದಿವೆ. ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಶಾಸಕರ ಬೆಂಬಲಿಗರು ಸಹಕರಿಸುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲು  ಮುಂದಾ­­ಗುತ್ತಿಲ್ಲ, ತಾಲ್ಲೂಕಿನಲ್ಲಿ ನಡೆ­ಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ರಾಮೇಗೌಡ, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ನಾರಾಯಣಗೌಡ, ಕೆಂಚೇ­ಗೌಡ , ದೇವರಾಜ್‌, ಬೈಚೇಗೌಡ, ರಘು­ನಾಥ್‌, ನಾಗರಾಜ್‌, ನಾರಾ­ಯಣ­ಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.