ADVERTISEMENT

ಬಸ್‌ಗೆ ಬೆಂಕಿ: ತಡವಾದದ್ದೆ ಮುಳುವಾಯ್ತೆ?

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 10:10 IST
Last Updated 3 ಸೆಪ್ಟೆಂಬರ್ 2011, 10:10 IST

ಕೋಲಾರ: `ಅಧಿಕಾರಿಗಳು ಚಾರ್ಜ್ ಎಂದಿದ್ದರೆ ಬಸ್ ಅನ್ನು ಉಳಿಸುತ್ತಿದ್ದೆವು. ಆದರೆ ಅಲ್ಲಿ ಅಂಥ ನಿರ್ಧಾರ ಕೈಗೊಳ್ಳು ವವರು ಇರಲಿಲ್ಲ~

-ಇದು ಮೀಸಲು ಪಡೆಯ, ಹೆಸರು ಹೇಳಲು ಬಯಸದ ಕೆಲವು ಕಾನ್‌ಸ್ಟೆಬಲ್‌ಗಳ ಅಭಿಪ್ರಾಯ.
ನಗರದ ಹೊಸ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ಬಸ್‌ಗೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಜನ ಕಲ್ಲುತೂರಾಟ ನಡೆಸಿ, ಬಸ್‌ಗೆ ಬೆಂಕಿ ಹಚ್ಚಿದ ಘಟನೆ ನಿಯಂತ್ರಣಕ್ಕೆ ನಿಯೋಜಿತರಾದ ಕೆಲವರು, ತಮ್ಮ ಮೇಲಧಿಕಾರಿಗಳ ಬಗ್ಗೆ ಹೀಗೆ ಗುರುವಾರ ಮಧ್ಯರಾತ್ರಿ `ಪ್ರಜಾವಾಣಿ~ಯೊಂದಿಗೆ ಅಸಮಾಧಾನ ತೋಡಿಕೊಂಡರು.

`ಬಸ್ ಅನ್ನು ಉರುಳಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲೆ ಲಾಠಿಪ್ರಹಾರ ನಡೆಸುವಂತೆ ಸೂಚನೆ ನೀಡಿದ್ದರೆ, ಉದ್ರಿಕ್ತರು ಬಸ್‌ಗೆ ಬೆಂಕಿ ಹಚ್ಚುವ ಯತ್ನ ವಿಫಲವಾಗುತ್ತಿತ್ತು. ಆದರೆ ಉದ್ರಿಕ್ತರನ್ನು ಸುಮ್ಮನೆ ಬೆದರಿಸುವ ಪ್ರಯತ್ನವಷ್ಟೇ ನಡೆಯಿತು. ಅದರಿಂದ ಆದ ಪ್ರಯೋಜನ ಕಡಿವೆು. ಅಲ್ಲದೆ, ನಾವೂ ಕಲ್ಲೇಟು ಎದುರಿಸಬೇಕಾಯಿತು~ ಎಂದು ಅವರು ನುಡಿದರು.

ಆದರೆ ಈ  ಕುರಿತು ಶುಕ್ರವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಭಿನ್ನವಾಗಿ ಪ್ರತಿಕ್ರಿಯಿ ಸಿದರು. `ಘಟನೆಯ ಬೆನ್ನಿಗೇ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳಕ್ಕೆ ಧಾವಿಸಿದ ನಾನು ಮುನ್ನುಗ್ಗುತ್ತಲೇ ಸಿಬ್ಬಂದಿಯನ್ನು ಹುರಿದುಂಬಿಸಿದೆ. ಆದರೆ ಹಲವರು ಕಡಿವೆು ಉತ್ಸಾಹವನ್ನು ತೋರಿಸಿದರು.

ಅಲ್ಲದೆ, ಘಟನೆಯನ್ನು ಯಾರಿಗೂ ತೊಂದರೆ ಯಾಗದಂತೆ ನಿರ್ವಹಿಸುವುದೇ ನಮ್ಮ ಕಾರ್ಯಾಚರಣೆಯ ಉದ್ದೇಶವಾಗಿತ್ತು. ಹೀಗಾಗಿ ಗಾಳಿಯಲ್ಲಿ ಗುಂಡು, ಆಶ್ರುವಾಯು ಪ್ರಯೋಗಿಸಿ ಹಿಮ್ಮೆಟ್ಟಿಸಿದೆವು~ ಎಂದರು.
ಘಟನೆ ಗೊತ್ತಾಗುತ್ತಿದ್ದಂತೆಯೇ ಗಲ್‌ಪೇಟೆ ಠಾಣೆ ಎಸ್‌ಐ ಸಂತೋಷಕುಮಾರ್, ಸಂಚಾರಿ ಠಾಣೆ ಎಸ್‌ಐ ಚಂದ್ರಪ್ಪ ಸ್ಥಳಕ್ಕೆ ಧಾವಿಸಿದ್ದರು. ನಗರ ಠಾಣೆಯ ಕೆಲವು ಸಿಬ್ಬಂದಿಯೂ ಇದ್ದರು. ಮೊದಲಿಗೆ ಉದ್ರಿಕ್ತರನ್ನು ಸಮಾಧಾನಗೊಳಿಸುವ ಯತ್ನ ನಡೆಸಿದೆವು. ಅದೇ ವೇಳೆ, ಸ್ಥಳಕ್ಕೆ ಮೀಸಲು ಪಡೆ ವಾಹನಗಳನ್ನೂ ಕರೆಸಿಕೊಂಡೆವು. ನಮ್ಮ ಪ್ರಯತ್ನದ ನಡುವೆಯೇ ಉದ್ರಿಕ್ತರು ಹೆಚ್ಚು ಆವೇಶಕ್ಕೆ ಒಳಗಾಗಿ ಬೆಂಕಿ ಹಚ್ಚಿದರು~ ಎಂದರು.

`ಅಪಘಾತವಾದ ಕೂಡಲೇ ಸ್ಥಳಕ್ಕೆ 108 ತುರ್ತು ವಾಹನ ಬರಲಿಲ್ಲ, ಪೊಲೀಸರು ಬರಲಿಲ್ಲ ಎಂದು ಹೇಳುವುದೂ ಸರಿಯಲ್ಲ. ಗಣೇಶ ಚತುರ್ಥಿ ಪ್ರಯುಕ್ತ ಜಿಲ್ಲೆಯಾದ್ಯಂತ ಭದ್ರತೆ ಸಲುವಾಗಿ ಎಲ್ಲ ಪೊಲೀಸ್ ಸಿಬ್ಬಂದಿ ನಿಯೋಜಿಸ ಲಾಗಿತ್ತು. ಅವರು ಸಾಧ್ಯವಾದಷ್ಟೂ ಬೇಗನೇ ಸ್ಥಳಕ್ಕೆ ಬಂದರು~ ಎಂದು ತಿಳಿಸಿದರು.
ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಘಟನೆ ಬಗ್ಗೆ ವೈರ್‌ಲೆಸ್ ಮೂಲಕ ಮಾಹಿತಿ ಗೊತ್ತಾಗುತ್ತಿದ್ದಂತೆಯೇ, ಗಾಂಧಿನಗರದಲ್ಲಿದ್ದ ಗಲ್‌ಪೇಟೆ ಠಾಣೆ ಎಸ್‌ಐ ಎಲ್.ಸಂತೋಷಕುಮಾರ್ ತಮ್ಮ ಸಿಬ್ಬಂದಿ ಜತೆ ಧಾವಿಸಿದ್ದರು. ಅವರೊಡನೆ ನಗರ ಠಾಣೆ ಎಎಸ್‌ಐ ಕೃಷ್ಣಪ್ಪ ಸೇರಿದಂತೆ ಕೆಲವು ಸಿಬ್ಬಂದಿ ಇದ್ದರು.
`ಕಲ್ಲು ತೂರುತ್ತಿದ್ದವರನ್ನು ಎದುರಿಸುತ್ತಿದ್ದ ವೇಳೆಯಲ್ಲೆ ಇನ್ನೊಂದು ಗುಂಪು ಬಸ್ ಅನ್ನು ಉರುಳಿಸಲು ಯತ್ನಿಸುತ್ತಿತ್ತು. ಒಂದು ಗುಂಪನ್ನು ದೂರ ದಬ್ಬುತ್ತಿದ್ದಂತೆ ಮತ್ತೊಂದು ಗುಂಪು ಇನ್ನೊಂದು ಕಡೆಯಿಂದ ಕಾರ್ಯಪ್ರವೃತ್ತವಾಗುತ್ತಿತ್ತು ಎಂದು ಕೆಲವು ಸಿಬ್ಬಂದಿ ತಿಳಿಸಿದರು.

ಶ್ಲಾಘನೀಯ ಪ್ರಯತ್ನ:  ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಕೇಂದ್ರ ವಲಯ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ನಿಯಂತ್ರಣ ಕಷ್ಟಸಾಧ್ಯವಾದ ಸನ್ನಿವೇಶದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.