ADVERTISEMENT

ಮಲ್ಯರಿಂದ 100 ಕೋಟಿ ಲಂಚ

​ಪ್ರಜಾವಾಣಿ ವಾರ್ತೆ
Published 2 ಮೇ 2011, 11:10 IST
Last Updated 2 ಮೇ 2011, 11:10 IST

ಕೋಲಾರ:  ರಾಜ್ಯಸಭಾ ಚುನಾವಣೆಯ ಸಂದರ್ಭ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರು ಉದ್ಯಮಿ ವಿಜಯಮಲ್ಯ ಅವರಿಂದ 100 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು  ಶಾಸಕ ಆರ್‌. ವರ್ತೂರು ಪ್ರಕಾಶ್‌ ಆರೋಪಿಸಿದರು.

ತಾಲ್ಲೂಕಿನ ವೇಮಗಲ್‌ನ ಬಯಲು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ ಮತ್ತು ಹಲವು ಮುಖಂಡರ ಸೇರ್ಪಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಒಂದಷ್ಟು ಶಾಸಕರನ್ನು ತೋರಿಸಿ 100 ಕೋಟಿ ರೂಗಳನ್ನು ಮಲ್ಯರಿಂದ ಪಡೆದ ಕುಮಾರಸ್ವಾಮಿ ಅದನ್ನು ಯಾರಿಗೂ ನೀಡಲಿಲ್ಲ~ ಎಂದು ದೂರಿದರು.

`ಇತ್ತೀಚೆಗೆ ನಾನು ಹಾವೇರಿಯಲ್ಲಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಆರೋಪ ಸತ್ಯ. ಸರ್ಕಾರ ಉರುಳಿಸಲು ರೆಡ್ಡಿಗಳಿಂದ ಪಡೆದಿದ್ದ 300 ಕೋಟಿಯಲ್ಲಿ 50 ಕೋಟಿಯನ್ನು ಸರ್ಕಾರದ ವಿರುದ್ಧ ದನಿಯೆತ್ತಿದ್ದ ಶಾಸಕರಿಗೆ ನೀಡಿ ಉಳಿದ 250 ಕೋಟಿಯನ್ನು ಕುಮಾರಸ್ವಾಮಿ ಲೂಟಿ ಮಾಡಿದರು. ಅದನ್ನು ಹೇಳಿದರೆ, ಅವರು ಕೋಲಾರಕ್ಕೆ ಬಂದು ನನ್ನನ್ನು ಜರೆದಿದ್ದಾರೆ ಎಂದರು.

 ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನಿಂದಲೂ ಜೆಡಿಎಸ್‌ ಮಾಯವಾಗಲಿದೆ. ರಾಜ್ಯಾದಾದ್ಯಂತ 27 ಕ್ಷೇತ್ರಗಳಷ್ಟೇ ಜೆಡಿಎಸ್‌ಗೆ ಲಭಿಸಲಿವೆ ಎಂದು ಭವಿಷ್ಯ ನುಡಿದರು.
ಬೆಂಬಲಿಗರೆಲ್ಲ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡರು ಮುಂದಿನ ಎರಡು ತಿಂಗಳಲ್ಲಿ ವಿಧಾನಸಬೆ ಚುನಾವಣಾ ಕಣದಿಂದ ದೂರ ಸರಿಯುವ ನಿರ್ಧಾರ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ಇದೇ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ ಸೇರಿದಂತೆ ವೇಮಗಲ್‌ ಹೋಬಳಿಯ ಹಲವಾರು ಗ್ರಾಮಗಳ ಮುಖಂಡರು ವರ್ತೂರು ಬಣಕ್ಕೆ ಸೇರ್ಪಡೆಯಾದರು. ಬೆಗ್ಲಿ ಸೂರ್ಯಪ್ರಕಾಶ್‌, ಜಿಪಂ ಸದಸ್ಯರಾದ ಅಮರ್‌ನಾಥ್‌, ಭಾರತಿ, ತಾಪಂ ಅಧ್ಯಕ್ಷೆ ರಮಾದೇವಿ ಸದಸ್ಯರಾದ ಮುನಿಬೈರಪ್ಪ, ಭಾಗ್ಯಲಕ್ಷ್ಮೀ, ಕೃಷ್ಣಾಪುರ ಶ್ರೀನಿವಾಸ್‌, ಕೋಮಲಾ, ಛತ್ರಕೋಡಿಹಳ್ಳಿ ರಾಜಗೋಪಾಲ್‌, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಎನ್‌. ರಾಜಣ್ಣ, ನಗರಸಭೆ ಸದಸ್ಯ ಸಿ. ಸೋಮಶೇಖರ್‌, ಮಾಜಿ ಸದಸ್ಯ ಸಿ. ರಘುರಾಂ, ವಕ್ಕಲೇರಿ ರಾಮು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.