ADVERTISEMENT

ಮಳೆ ನಿರೀಕ್ಷೆಯಲ್ಲಿ ರೈತ ಸಮುದಾಯ

ಜಿಲ್ಲೆಯಾದ್ಯಂತ 640 ಹೆಕ್ಟೇರ್‌ನಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 5:09 IST
Last Updated 11 ಜೂನ್ 2013, 5:09 IST

ಕೋಲಾರ: ಮುಂಗಾರು ಮಳೆಗಾಗಿ ಕಾಯುತ್ತಿರುವ ಜಿಲ್ಲೆಯ ರೈತರು ಬಿತ್ತನೆಗೆ ಸಿದ್ಧತೆಗೆ ನಡೆಸಿದ್ದಾರೆ.
ಆದರೆ ಜೂನ್ 3ರಂದು ಬಿದ್ದ ಮಳೆ ಮತ್ತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಉಳುಮೆ ಮಾಡಿರುವ ರೈತರಿಗೆ ಕಾಯುವುದು ಅನಿವಾರ್ಯವಾಗಿದೆ. ಹಲವೆಡೆ ಎರಡು-ಮೂರು ಬಾರಿ ಉಳುಮೆ ಮಾಡಲಾಗಿದೆ. ಇದೇ ವೇಳೆ ಕೆಲವೆಡೆ ರೈತರು ಎಳ್ಳು, ತೊಗರಿ, ನೆಲಗಡಲೆ, ಅಲಸಂದೆ ಬಿತ್ತನೆ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಜಿಲ್ಲೆಯನ್ನು ಬರದ ನೆರಳು ಆವರಿಸಿದೆ. ಈ ವರ್ಷ ಅದು ಮುಂದುವರಿಯುವ ಆತಂಕವೇನೂ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ರೈತರನ್ನು ಮಾತನಾಡಿಸಿದರೆ ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ಬಂದ ಮಳೆ ಆಶಾದಾಯಕವಾಗೇನೂ ಸುರಿದಿರಲಿಲ್ಲ. ಜೂನ್ ತಿಂಗಳಲ್ಲಿ ಮಳೆ ಬರಬಹುದೆಂಬ ನಿರೀಕ್ಷೆಯಲ್ಲೇ ನೆಲವನ್ನು ಹಸನುಗೊಳಿಸಿರುವ ರೈತರು ಬಿತ್ತನೆಗೆ ಕಾಯುತ್ತಿದ್ದರು. ಈ ವರ್ಷವೂ ಜಿಲ್ಲೆಯಲ್ಲಿ ಅದೇ ಸನ್ನಿವೇಶವಿದೆ.

ಅಲ್ಪಾವಧಿ ಬೆಳೆಗಳಾದ ರಾಗಿ, ಹುರಳಿ, ಅಲಸಂದೆ ಉದ್ದು, ಕಿರುಧಾನ್ಯಗಳಿಗೆ ಅವಕಾಶವಿದ್ದರೂ; ದೀರ್ಘಾವಧಿ ಬೆಳೆಗಳಾದ ನೆಲೆಗಡಲೆ, ತೊಗರಿ, ಎಳ್ಳು ಬಿತ್ತನೆ ವೇಗಕ್ಕೆ ಕಡಿವಾಣ ಬಿದ್ದಿದೆ. ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಕಳೆದ ವರ್ಷ ಜೂನ್ 3ರ ವೇಳೆಗೆ ಸರಾಸರಿ 161.8 ಮಿ.ಮೀ. ಮಳೆ ಸುರಿದಿತ್ತು. ಆದರೆ ಈ ಬಾರಿ 159.4 ಮಳೆಯಷ್ಟೇ ಆಗಿದೆ. ಹೇಳಿಕೊಳ್ಳುವ ವ್ಯತ್ಯಾಸವೇನೂ ಇಲ್ಲದಿದ್ದರೂ ಮಳೆ ಕೊರತೆಯ ಸಮಸ್ಯೆ ಮುಂದುವರಿಯುತ್ತಲೇ ಇದೆ. ಜೂನ್ ತಿಂಗಳ ವಾಡಿಕೆ ಮಳೆ 54 ಮಿ.ಮೀ. ಜೂನ್ ಕೊನೆ ವೇಳೆಗೆ ಮುಂಗಾರು ಸುರಿಯಬಹುದು ಎಂಬ ನಿರೀಕ್ಷೆ ರೈತರದ್ದು.

ಬಿತ್ತನೆ ಕಡಿಮೆ: ಏಪ್ರಿಲ್-ಮೇ ತಿಂಗಳಲ್ಲೇ ನೆಲವನ್ನು ಉತ್ತಿರುವ ರೈತರಿಗೆ ಬಿತ್ತನೆಯ ಅವಕಾಶ ಕೊಂಚ ದೊರೆತಿರುವುದು ಸಮಾಧಾನಕರವಾಗಿದೆ. ಪರಿಣಾಮವಾಗಿ ಜಿಲ್ಲಾದ್ಯಂತ 1.02 ಲಕ್ಷ ಹೆಕ್ಟೇರ್ ಗುರಿಯಲ್ಲಿ ಇದುವರೆಗೆ 640 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಕಳೆದ ವರ್ಷ ಜೂನ್ 15ರ ಹೊತ್ತಿಗೆ ಕೇವಲ 225 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಈ ಹೊತ್ತಿಗೆ 10 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು.

ಜೂನ್ ಮೊದಲ ವಾರದಲ್ಲೇ ಚುರುಕು ಪಡೆಯಬೇಕಿದ್ದ ನೆಲಗಡಲೆ ಬಿತ್ತನೆ ಕಾರ್ಯ ಮಳೆ ಕೊರತೆ ಕಾರಣ ನಿಧಾನಗತಿಯಲ್ಲಿ ನಡೆಯುತ್ತಿದೆ.
ಮುಳಬಾಗಲಿನಲ್ಲಿ 290 ಹೆಕ್ಟೇರ್‌ನಷ್ಟು ನೆಲಗಡಲೆ, ಮಾಲೂರಿನಲ್ಲಿ 150 ಹೆಕ್ಟೇರ್‌ನಷ್ಟು ಎಳ್ಳು ಬಿತ್ತನೆಯಾಗಿದೆ. ಜೂನ್ ಕೊನೆ ಹೊತ್ತಿಗೆ ಮಳೆ ಬಂದರೆ ನೆಲಗಡಲೆ ಬಿತ್ತನೆ ವೇಗ ಪಡೆಯಲಿದೆ. ಜುಲೈ 15ರವರೆಗೂ ನೆಲಗಡಲೆ ಬಿತ್ತನೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

ಬಂಗಾರಪೇಟೆಯಲ್ಲಿ 23,730 ಹೆಕ್ಟೇರ್ ಗುರಿಗೆ 46 ಹೆಕ್ಟೇರ್, ಕೋಲಾರ ತಾಲ್ಲೂಕಿನಲ್ಲಿ 19,200 ಹೆಕ್ಟೇರ್ ಗುರಿಗೆ 185 ಹೆಕ್ಟೇರ್, ಮಾಲೂರು ತಾಲ್ಲೂಕಿನಲ್ಲಿ 16,350 ಹೆಕ್ಟೇರ್ ಗುರಿಗೆ 185 ಹೆಕ್ಟೇರ್, ಮುಳಬಾಗಲು ತಾಲ್ಲೂಕಿನಲ್ಲಿ 22,713 ಹೆಕ್ಟೇರ್ ಗುರಿಗೆ 224 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆ ಆರಂಭವಾಗಬೇಕಿದೆ.

ಗೊಬ್ಬರ, ಬೀಜ: 9500 ಕ್ವಿಂಟಲ್ ಬಿತ್ತನೆ ಬೀಜ ಅಗತ್ಯ ಬೀಳಲಿದ್ದು, 8917 ಕ್ವಿಂಟಲ್‌ಗಾಗಿ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ. ರಾಗಿ 1268 ಕ್ವಿಂಟಲ್, ಹುರುಳಿ 197 ಕ್ವಿಂಟಲ್, ನೆಲಗಡಲೆ 1342 ಕ್ವಿಂಟಲ್, ಬತ್ತ 72 ಕ್ವಿಂಟಲ್, ಅಲಸಂದೆ 74 ಕ್ವಿಂಟಲ್ ಸೇರಿದಂತೆ 2954 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಣ್ಣ ತಿಳಿಸಿದ್ದಾರೆ.

ಭೂಮಿ ಹದ ಮಾಡಿಕೊಂಡ ಕಾಯುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಬಂದ ಮಳೆಗೆ ಜಮೀನನ್ನು ಒಮ್ಮೆ ಉಳುಮೆ ಮಾಡಿದ್ದೆವು. ಈಗ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದೇವೆ. ಮತ್ತೊಮ್ಮೆ ಉಳುಮೆ ಮಾಡಲು ಮಳೆ ಬರಬೇಕಿದೆ ಎನ್ನುತ್ತಾರೆ ನಗರ ಹೊರವಲಯದ ತೇರಳ್ಳಿಯ ರೈತ ಮಹಿಳೆ ಅಶ್ವಥಮ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.