ADVERTISEMENT

ಮಹಿಳಾ ಕಾಲೇಜಿಗೆ ನ್ಯಾಕ್‌ ಸಮಿತಿ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 15:43 IST
Last Updated 13 ಅಕ್ಟೋಬರ್ 2018, 15:43 IST

ಕೋಲಾರ: ರಾಷ್ಟ್ರೀಯ ಪರಿಶೀಲನಾ ಮಾನ್ಯತಾ ಪರಿಷತ್ (ನ್ಯಾಕ್) ಸದಸ್ಯರು ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ಶನಿವಾರ ಭೇಟಿ ನೀಡಿ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಕ್‌ ಸಮಿತಿಯು 5 ವರ್ಷಕ್ಕೊಮ್ಮೆ ಪ್ರಥಮ ದರ್ಜೆ ಕಾಲೇಜುಗಳಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಗ್ರೇಡ್ ನೀಡುತ್ತದೆ. ಈ ಗ್ರೇಡ್ ಆಧರಿಸಿ ವಿಶ್ವವಿದ್ಯಾಲಯ ಅನುದಾನ ಸಮಿತಿಯು (ಯುಜಿಸಿ) ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತದೆ.

ನಗರದ ಸರ್ಕಾರಿ ಮಹಿಳಾ ಕಾಲೇಜು ಸದ್ಯ ಬಿ ಗ್ರೇಡ್ ಹೊಂದಿದ್ದು, ಇದೀಗ 5 ವರ್ಷಗಳ ನಂತರ ನ್ಯಾಕ್ ಸಮಿತಿ ಪರಿಶೀಲನೆ ನಡೆಸಿದೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಅವರ ನೇತೃತ್ವದ ಅಧ್ಯಾಪಕರ ತಂಡವು ಕಾಲೇಜಿನ ಶೈಕ್ಷಣಿಕ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಕುರಿತು ನ್ಯಾಕ್‌ ಸಮಿತಿಗೆ ಈ ಹಿಂದೆಯೇ ವರದಿ ಸಲ್ಲಿಸಿತ್ತು.

ADVERTISEMENT

ಈ ವರದಿ ಆಧರಿಸಿ ನ್ಯಾಕ್‌ ಸಮಿತಿ ಸದಸ್ಯರು ಕಾಲೇಜಿನ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದರು. ಕಾಲೇಜಿಗೆ ಬಿ ಪ್ಲಸ್ ಅಥವಾ ಎ.ಎ ಪ್ಲಸ್ ಉತ್ತಮ ಶ್ರೇಣಿ ಮಾನ್ಯತೆ ಸಿಗುವ ನಿರೀಕ್ಷೆಯಿದ್ದು, ನ್ಯಾಕ್‌ ಸಮಿತಿ ಸದಸ್ಯರು ಯುಜಿಸಿಗೆ ನೀಡುವ ವರದಿ ಆಧಾರದಲ್ಲಿ ಅಂತಿಮ ನಿರ್ಧಾರವಾಗಲಿದೆ.

ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಪರಿಮಳ್ ಎಚ್.ವ್ಯಾಸ್, ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಕೆ.ಉಷಾರಾಣಿ, ಮುಂಬೈನ ಕೆ.ಜಿ.ಮಿಟ್ಟಲ್ ಕಾಲೇಜಿನ ಪ್ರಾಂಶುಪಾಲೆ ಸುಹಾಸಿನಿ ಆರ್ಯ ಅವರು ನ್ಯಾಕ್‌ ಸಮಿತಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.