ADVERTISEMENT

ಮಾಲೂರು: ಅನಧಿಕೃತ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:25 IST
Last Updated 16 ಫೆಬ್ರುವರಿ 2011, 10:25 IST

ಮಾಲೂರು: ಪಟ್ಟಣದ ಮಾರುತಿ ಬಡಾವಣೆ 2ನೇ ಹಂತದಲ್ಲಿ ಅನುಮೋದಿತ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದ ಪುರಸಭೆಗೆ ಸೇರಿದ ಸ್ಥಳವನ್ನು ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಪತಿ ನೇತೃತ್ವದ ತಂಡ ಪೊಲೀಸರ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ  ಮಂಗಳವಾರ ಮುಂಜಾನೆ ತೆರವುಗೊಳಿಸಿದೆ. ತಿರುಮಲ ಕಲ್ಯಾಣ ಮಂಟಪ ಮುಖ್ಯರಸ್ತೆ ಸಮೀಪ ರೇಣುಕ ಎಂಬುವರು ಪುರಸಭಾ ಖಾತೆ ನಂ. 5478/5189/24ರಲ್ಲಿ 54ಕ್ಕೆ 40 ಅಡಿಗಳ ಖಾಲಿ ನಿವೇಶನದಲ್ಲಿ ಯೋಜನಾ ಪ್ರಾಧಿಕಾರದ ಅನುಮೋದಿತ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಯಿಂದ ರೇಣುಕಾ ಎಂಬುವರಿಗೆ 3 ಬಾರಿ ನೋಟಿಸ್ ಜಾರಿಗೊಳಿಸಿದ್ದರೂ; ಒತ್ತುವರಿ ತೆರವು ಗೊಳಿಸಿರಲಿಲ್ಲ.

ಆದ್ದರಿಂದ ಮುನಿಸಿಪಲ್ ಕಾಯ್ದೆ ಕಲಂ 187(7) ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ 15(4) ರನ್ವಯ ಮೇಲ್ನೋಟಕ್ಕೆ ಅಪರಾಧವಾಗಿರುವುದರಿಂದ ನೋಟಿಸ್ ತಲುಪಿದ 7 ದಿನಗೊಳಗಾಗಿ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ ಭಾಗ ತೆರವುಗೊಳಿಸುವಂತೆ ಲಿಖಿತ ಹೇಳಿಕೆ ನೀಡಬೇಕು ಎಂದು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದ್ದರು. ಯಾವುದೇ ಕ್ರಮ ಕೈಗೊಳ್ಳದ ಕಾರಣ ಒತ್ತುವರಿ ಕಟ್ಟಡವನ್ನು ಮಂಗಳವಾರ ಮುಂಜಾನೆ ಪುರಸಭೆ ವತಿಯಿಂದ ತೆರವುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಲಕ್ಷ್ಮೀಪತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.