ಚಿಂತಾಮಣಿ: ಕೋಲಾರ ಲೋಕಸಭೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದ್ದು, ಪ್ರಚಾರ ವೈಖರಿಯಲ್ಲೂ ಜಿದ್ದಾಜಿದ್ದಿ ಏರ್ಪಟ್ಟಿದೆ.
ವಿವಿಧ ಪಕ್ಷಗಳ ಮುಖಂಡರು, ಹಿರಿಯ ಮತ್ತು ಕಿರಿಯ ನಾಯಕರು ನಾ ಮುಂದು–ತಾ ಮುಂದು ಎಂಬಂತೆ ಹೋಬಳಿವಾರು ಪ್ರಚಾರ ಮತ್ತು ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಷ್ಟೇ ಅಲ್ಲ, ಡಾ.ಎಂ.ಸಿ.ಸುಧಾಕರ್ ಬೆಂಬಲಿಗರ ಗುಂಪಿನಲ್ಲೂ ಅನಿರೀಕ್ಷಿತ ಬೆಳವಣಿಗೆಗಳು ಆಗುತ್ತಿವೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಬಲಾಬಲ ಪ್ರದರ್ಶಿಸುವ ಕಾರ್ಯದಲ್ಲಿ ನಿರತವಾಗಿವೆ. ಕಾಂಗ್ರೆಸ್‌ನಿಂದ ದೂರವಾದರೇನಂತೆ ಎಂ.ಸಿ.ಸುಧಾಕರ್ ಅವರ ಪ್ರಭಾವ ಇನ್ನೂ ದಟ್ಟವಾಗಿದೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿದ್ದರೂ ಚಿಂತಾಮಣಿ ಮತ್ತು ಶಿಡ್ಲಘಟ್ಟ ಎರಡೂ ವಿಧಾನಸಭಾ ಕ್ಷೇತ್ರಗಳು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಎರಡರಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಶಾಸಕ ಎಂ.ಕೃಷ್ಣಾರೆಡ್ಡಿ ಚಿಂತಾಮಣಿಯಲ್ಲಿ ತಮ್ಮದೇ ಹಿಡಿತ ಎಂದು ಹೇಳಿಕೊಂಡರೆ, ಎಂ.ರಾಜಣ್ಣ ಶಿಡ್ಲಘಟ್ಟದಲ್ಲಿ ತಮ್ಮ ದಟ್ಟ ಪ್ರಭಾವವಿದೆ ಎಂದು ಹೇಳಿಕೊಳ್ಳುತ್ತಾರೆ.
ಈ ಎಲ್ಲದರ ಮಧ್ಯೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಮತ್ತು ಎಂ.ಸಿ.ಸುಧಾಕರ್ ಮಧ್ಯೆ ಹಲವು ವರ್ಷಗಳಿಂದ ಇರುವ ಶೀತಲ ಸಮರ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನಿಂದ ದೂರವಾಗಿರುವ ಎಂ.ಸಿ.ಸುಧಾಕರ್ ಅವರು ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಪಣತೊಟ್ಟಂತೆ ಕಂಡು ಬರುತ್ತಿದೆ.
ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡೇ ರಾಜಕೀಯ ಜೀವನ ನಡೆಸಿದ ಡಾ.ಎಂ.ಸಿ.ಸುಧಾಕರ್, ಈ ಬಾರಿ ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುವರು. ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಕ್ಕಿಂತ ಜೆಡಿಎಸ್ ಜೊತೆ ಗುರುತಿಸಿಕೊಂಡರೇ ಉತ್ತಮ ಎಂಬ ಭಾವನೆ ಅವರು ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ನಾಯಕತ್ವದಲ್ಲಿ ಜೆಡಿಎಸ್ ಮುಖಂಡರು ಈಗಾಗಲೇ ತಾಲ್ಲೂಕಿನ ಬಟ್ಲಹಳ್ಳಿ, ಮುರುಗಮಲ್ಲ, ಮಾಡಿಕೆರೆ ಕ್ರಾಸ್, ಉಪ್ಪಾರಪೇಟೆ, ಕೈವಾರ ಮುಂತಾದ ಕಡೆ ರಾಜಕೀಯ ಸಮಾವೇಶ ಮತ್ತು ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಶಾಸಕರಾದ ಎಂ.ಕೃಷ್ಣಾರೆಡ್ಡಿ, ಎಂ.ರಾಜಣ್ಣ, ಜೆಡಿಎಸ್ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಶ್ರೀನಿವಾಸಗೌಡ ಮುಂತಾದವರು ಸಭೆಯಲ್ಲಿ ಪಾಲ್ಗೊಂಡು ಮತ ಯಾಚಿಸಿದ್ದಾರೆ.
ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಎಂ.ಸಿ.ಸುಧಾಕರ್ ಇನ್ನೂ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. ಅದಕ್ಕಾಗಿಯೇ ಹೋಬಳಿವಾರು ಸಭೆ ನಡೆಸಲಾಗುತ್ತಿದೆ. ನಾವು ಜೆಡಿಎಸ್‌ಗೆ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ ಎಂದು ಸುಧಾಕರ್ ಬೆಂಬಲಿಗರು ಹೇಳುತ್ತಾರೆ.
ಹೋಬಳಿಗಳ ಸಭೆ ನಂತರ ತಾಲ್ಲೂಕು ಮಟ್ಟದಲ್ಲಿ ಬೆಂಬಲಿಗರ ಸಭೆ ಕರೆದು, ತೀರ್ಮಾನಿಸಲಾಗುವುದು ಎಂದು ಸುಧಾಕರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.