ADVERTISEMENT

ಮೂಲಸೌಕರ್ಯಕ್ಕೆ ಆಗ್ರಹ: ಸಮತಾ ಸೈನಿಕ ದಳ ಧರಣಿ

​ಪ್ರಜಾವಾಣಿ ವಾರ್ತೆ
Published 29 ಮೇ 2012, 7:45 IST
Last Updated 29 ಮೇ 2012, 7:45 IST

ಕೆಜಿಎಫ್: ನಗರದ ಎಲ್ಲ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಸೋಮವಾರ ರಾಬರ್ಟ್‌ಸನ್ ಪೇಟೆಯಲ್ಲಿ ಧರಣಿ ನಡೆಸಿದರು.

ರಾಬರ್ಟ್‌ಸನ್ ಪೇಟೆ ನಗರಸಭಾ ಕಚೇರಿ ಮುಂಭಾಗ ಧರಣಿ ಕುಳಿತ ಕಾರ್ಯಕರ್ತರು ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಗರದ ಪೈಪ್‌ಲೈನ್‌ನಲ್ಲಿ 2003ರಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕರಿಗೆ ಸೇರಿದ ಈ ಭವನವನ್ನು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ.

ಕೂಡಲೇ ಭವನವನ್ನು ಅವರಿಂದ ಮುಕ್ತಗೊಳಿಸಿ ದಲಿತ ಸಂಘಟನೆಗಳು ಸಭೆ- ಸಮಾರಂಭಗಳನ್ನು ನಡೆಸಲು ಅನುವು ಮಾಡಿಕೊಡಬೇಕು, ಆಂಡರಸನ್‌ಪೇಟೆ ಮತ್ತು ಊರಿಗಾಂ ವೃತ್ತವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಡಾ.ಅಂಬೇಡ್ಕರ್ ಹೆಸರನ್ನು ಇಡಬೇಕು.

ನಗರದಲ್ಲಿ ಕುಡಿಯುವ ನೀರು ವಿತರಣೆ ಮತ್ತು ನೈರ್ಮಲೀಕರಣ ಕಾರ್ಯಕ್ರಮವನ್ನು ತ್ವರಿತಗತಿಯಲ್ಲಿ ನಡೆಸಬೇಕು. ನಗರಸಭೆಗೆ ಸೇರಿದ ಅಂಗಡಿಗಳಿಗೆ ಹಲವಾರು ವರ್ಷಗಳಿಂದ ಟೆಂಡರ್ ಕರೆದಿಲ್ಲ. ತುರ್ತಾಗಿ ಅಂಗಡಿಗಳ ಟೆಂಡರ್ ಕರೆದು ಬೀದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. 

ನಂತರ ನಗರಸಭೆ ಆಯುಕ್ತ ಬಾಲಚಂದ್ರ ಮತ್ತು ಜಲಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಘುನಾಥಯ್ಯ ಶೆಟ್ಟಿ, ಸಹಾಯಕ ಎಂಜಿನಿಯರ್ ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಮುಖಂಡರಾದ ಜೆರ‌್ರಿ ಜಯಕುಮಾರ್, ಸಿ.ಆರ್.ಕುಮಾರ್, ಮುಕುಂದ, ಕುಪೇಂದ್ರ, ಯೋಗ ಪ್ರೇಮನಾಥ್, ವೆಂಕಟೇಶ ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.