ADVERTISEMENT

ಮೂಲಸೌಲಭ್ಯ ನೀಡದೆ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 10:40 IST
Last Updated 7 ಸೆಪ್ಟೆಂಬರ್ 2011, 10:40 IST

ಬಂಗಾರಪೇಟೆ:  ಕಳೆದ ವಾರ ಯುವಜನ ಸೇವಾ ಇಲಾಖೆ ನಡೆಸಿದ ಪೈಕಾ ಮತ್ತು ದಸರಾ ಕ್ರೀಡಾಕೂಟಗಳು ಅವ್ಯವಸ್ಥೆಯ ತಾಣವಾಗಿ ಪರಿಣಮಿಸಿ ವ್ಯಾಪಕ ದೂರು ಕೇಳಿಬಂದಿದ್ದವು. ಈಗ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ತಾಲ್ಲೂಕು ಮಟ್ಟದ ಕ್ರೀಡಾಕೂಟ ಕೂಡ ಅದೇ ದಾರಿಯಲ್ಲಿ ಸಾಗಿದೆ. ಅವ್ಯವಸ್ಥೆಯನ್ನು ಸರಿಪಡಿಸುವ ಆಸಕ್ತಿ ಇಲಾಖೆ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ.

ಬೆಣಜು ಕಲ್ಲುಗಳ ಮೇಲಿನ ಓಟದ ಟ್ರ್ಯಾಕ್, ಗಟ್ಟಿ ಮರಳಿನ ಹೈಜಂಪ್ ಮತ್ತು ಲಾಂಗ್ ಜಂಪ್ ಪಿಟ್, ಕುಡಿಯಲು ನೀರಿಲ್ಲ, ಶೌಚಾಲಯ ಎಲ್ಲಿದೆ ಗೊತ್ತಿಲ್ಲ, ಅಂಬುಲೆನ್ಸ್ ಪತ್ತೆ ಇಲ್ಲ. ಹೀಗೆ ಇಲ್ಲಗಳ ಸರಮಾಲೆಯೇ ಕ್ರೀಡಾಕೂಟದಲ್ಲಿ ಎದ್ದು ಕಾಣುತ್ತಿದೆ.

ಕ್ರೀಡಾ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಆಸೆಯಿಂದ ಬರುವ ವಿದ್ಯಾರ್ಥಿಗಳು ಮೈದಾನ ನೋಡಿದ ಕೂಡಲೇ ನಿರಾಸೆಗೊಳ್ಳುತ್ತಾರೆ. ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ಕ್ರೀಡಾಕೂಟ ನಡೆಯುತ್ತಿರುವುದು ಇದಕ್ಕೆ ಕಾರಣ.

`ನಾವು ದೂರದಿಂದ ಬಂದಿದ್ದೇವೆ. ಮಧ್ಯಾಹ್ನಕ್ಕೆ ಊಟ ತಂದಿದ್ದೇವೆ. ನೀರು ಕೂಡ ತಗೊಂಡು ಬನ್ನಿ ಎಂದು ಹೇಳುತ್ತಾರೆ. ಎಷ್ಟು ನೀರು ಅಂತ ತೆಗೆದುಕೊಂಡು ಬರೋಣ~ ಎಂದು ಕಬಡ್ಡಿಯಲ್ಲಿ ಪೈನಲ್ ತಲುಪಿದ ಎನ್.ಜಿ.ಹುಲ್ಕೂರು ತಂಡದ ಬಾಲಕಿಯರ ತಂಡದ ಭವ್ಯ ಹೇಳುತ್ತಾರೆ. ಇಡೀ ದಿನ ಆಟವಾಡುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನಾದರೂ ಮಾಡಬೇಕೆನ್ನುವುದು ಆಯೋಜಕರಿಗೆ ತಿಳಿದಿಲ್ಲ.

`ಆಟಕ್ಕೆ ಬೇಕಾದ ಬಟ್ಟೆಗಳನ್ನು ಬದಲಾಯಿಸಿಕೊಳ್ಳಲು ಸಹ ಜಾಗವಿಲ್ಲ. ಸಣ್ಣ ವ್ಯಾನೊಂದರಲ್ಲಿ ಬಟ್ಟೆ ಬದಲಾಯಿಸಿ ಕೊಳ್ಳಬೇಕಾಯಿತು~ ಎಂದು ಕ್ರೀಡಾಪಟು ಸಂಗೀತ ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಅಧಿಕಾರಿ ಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಮೊದಲೇ ತಿಳಿದು ಪರಿಹಾರ ಒದಗಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.