ADVERTISEMENT

ರಾಗಿ ಬೆಳೆಗೆ ಕೀಟಬಾಧೆ: ಇಳುವರಿ ಕುಸಿಯುವ ಭೀತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 6:58 IST
Last Updated 9 ಅಕ್ಟೋಬರ್ 2017, 6:58 IST
ಕೋಲಾರ ಜಿಲ್ಲೆಯ ರಾಗಿ ತಾಕುಗಳಲ್ಲಿ ಕಾಣಿಸಿಕೊಂಡಿರುವ ಎಲೆ ಸುರುಳಿ ಹುಳು.
ಕೋಲಾರ ಜಿಲ್ಲೆಯ ರಾಗಿ ತಾಕುಗಳಲ್ಲಿ ಕಾಣಿಸಿಕೊಂಡಿರುವ ಎಲೆ ಸುರುಳಿ ಹುಳು.   

ಕೋಲಾರ: ರಾಜ್ಯದಲ್ಲಿ ರಾಗಿ ಬೆಳೆಗೆ ಎಲೆ ಸುರುಳಿ ಹಾಗೂ ಹಸಿರು ಗೇಣು ಕೀಟಬಾಧೆ ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ರಾಗಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 1.61 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗುತ್ತಿದ್ದು, ಸರಾಸರಿ 2.71 ಲಕ್ಷ ಟನ್‌ ರಾಗಿ ಉತ್ಪಾದನೆಯಾಗುತ್ತಿದೆ. ಏಳನೇ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 66 ಸಾವಿರ ಟನ್‌ ರಾಗಿ ಉತ್ಪಾದನೆಯಾಗುತ್ತಿದೆ.

ಸತತ ಬರದಿಂದ ಬೆಳೆ ಕಳೆದುಕೊಂಡು ಬಸವಳಿದಿದ್ದ ಜಿಲ್ಲೆಯ ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮು ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿತ್ತು.ಆದರೆ ಕೋಲಾರ ಜಿಲ್ಲೆ ಒಂದರಲ್ಲೇ 4,148 ಹೆಕ್ಟೇರ್ ರಾಗಿ ಬೆಳೆಯು ಕೀಟಬಾಧೆಗೆ ತುತ್ತಾಗಿದೆ. ತುಮಕೂರು ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ನಾಶಗೊಂಡಿದೆ.

ಸಾಮಾನ್ಯವಾಗಿ ಭತ್ತದ ಬೆಳೆಯಲ್ಲಿ ಎಲೆ ಸುರುಳಿ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ರಾಜ್ಯದಲ್ಲಿ ಈವರೆಗೆ ರಾಗಿ ಬೆಳೆಗೆ ಈ ರೋಗ ತಗುಲಿದ ಉದಾಹರಣೆ ಇಲ್ಲ. ಆದರೆ, ಇದೇ ಮೊದಲ ಬಾರಿಗೆ ರಾಗಿ ಬೆಳೆಗೆ ಎಲೆ ಸುರುಳಿ ಕೀಟಬಾಧೆ ಬಂದಿದ್ದು, ಕಾರಣ ನಿಗೂಢವಾಗಿದೆ.

ADVERTISEMENT

ಬಹುತೇಕ ಜಮೀನುಗಳಲ್ಲಿ ರಾಗಿ ಬೆಳೆ ಸೊಂಪಾಗಿ ಬೆಳೆದು ತೆನೆ ಕಟ್ಟುವ ಹಂತದಲ್ಲಿದ್ದು, ಎಲೆ ಸುರುಳಿ ಹಾಗೂ ಹಸಿರು ಗೇಣು ಹುಳುಗಳು ಗಿಡದ ಕೆಳ ಭಾಗದ ಎಲೆಗಳನ್ನು ತಿನ್ನುತ್ತಿವೆ. ತಡವಾಗಿ ಬಿತ್ತನೆಯಾಗಿರುವ ಜಮೀನುಗಳಲ್ಲಿ ಗಿಡಗಳ ಬೆಳವಣಿಗೆಯ ಹಂತದಲ್ಲೇ ಹುಳುಗಳು ಎಲೆ ಮೇಯುತ್ತಿವೆ. ಇದರಿಂದ ಬೆಳೆ ಒಣಗುತ್ತಿದ್ದು, ಇಳುವರಿ ಕುಸಿಯುವ ಭೀತಿ ಎದುರಾಗಿದೆ.

ತೇವಾಂಶ ಕಾರಣ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡವು ಕೋಲಾರ ತಾಲ್ಲೂಕಿನ ವೇಮಗಲ್‌, ಸುಗಟೂರು, ಹುತ್ತೂರು, ಶ್ರೀನಿವಾಸಪುರ ತಾಲ್ಲೂಕಿನ ಕಸಬಾ, ಮುಳಬಾಗಿಲು ತಾಲ್ಲೂಕಿನ ಬೈರಕೂರು ಮತ್ತು ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕೀಟಬಾಧಿತ ರಾಗಿ ತಾಕುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ಮಾಡಿದ್ದಾರೆ.

ಸೆಪ್ಟೆಂಬರ್‌ ಮಧ್ಯ ಭಾಗದಿಂದ ಪದೇ ಪದೇ ಮಳೆಯಾಗುತ್ತಿರುವ ಕಾರಣ ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಿದೆ. ಜತೆಗೆ ಜಮೀನುಗಳಲ್ಲಿ ಮಳೆ ನೀರು ನಿಂತಿರುವುದರಿಂದ ಮತ್ತು ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಕಡಿಮೆಯಾಗಿರುವ ಕಾರಣ ರಾಗಿ ಬೆಳೆಗೆ ಕೀಟಬಾಧೆ ಬಂದಿರುವ ಸಾಧ್ಯತೆ ಎಂದು ಕೃಷಿ ವಿಜ್ಞಾನಿಗಳು ಶಂಕಿಸಿದ್ದಾರೆ.

ರಾಜ್ಯವ್ಯಾಪಿ: ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಯಲ್ಲೂ ರಾಗಿ ಬೆಳೆಗೆ ಎಲೆ ಸುರುಳಿ ಹಾಗೂ ಹಸಿರು ಗೇಣು ಕೀಟಬಾಧೆ ಬಂದಿದೆ. ಜತೆಗೆ ಲದ್ದಿ ಹುಳು, ಕಾಂಡ ಕೊರೆಯುವ ಹುಳುವಿನ ಬಾಧೆ ಮತ್ತು ಬೆಂಕಿ ರೋಗ ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹತೋಟಿಗೆ ಬರುತ್ತಿಲ್ಲ: ರೈತರು ಬೆಳೆಗೆ ಗೋಮೂತ್ರ, ಬೇವಿನ ಎಣ್ಣೆ ಹಾಗೂ ವಿವಿಧ ಕೀಟನಾಶಕ ಸಿಂಪಡಿಸಿದರೂ ಕೀಟಬಾಧೆ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಒಂದು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಾ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಮತ್ತೊಂದೆಡೆ ಪಕ್ಕದ ರಾಗಿ ತಾಕುಗಳಿಗೆ ಕೀಟಬಾಧೆ ಹಬ್ಬುತ್ತಿದೆ. ಇದರಿಂದ ರೈತರು ಹಾಗೂ ಕೃಷಿ ವಿಜ್ಞಾನಿಗಳಿಗೆ ದಿಕ್ಕು ತೋಚದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.