ADVERTISEMENT

ವಾರದೊಳಗೆ ವರದಿ ಸಲ್ಲಿಸಿ: ಸಚಿವ ಖಾದರ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:27 IST
Last Updated 20 ಸೆಪ್ಟೆಂಬರ್ 2013, 8:27 IST

ಕೋಲಾರ: ಕಾಲುಬಾಯಿ ಜ್ವರದಿಂದ ನೂರಾರು ಹಸುಗಳು ಸಾವಿಗೀಡಾಗಿರುವ ಹಿನ್ನೆಲೆ­ಯಲ್ಲಿ ಒಂದು ವಾರದೊಳಗೆ ಸ್ಪಷ್ಟ ಚಿತ್ರಣವಿರುವ ವರದಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಉಪನಿರ್ದೇಶಕ ಬಿ.ಎನ್.ಶಿವರಾಂ ಅವರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದು­ಕೊಂಡ ಸಚಿವರು, ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಿಸಲು ರೈತರು ಹಿಂಜರಿ­ಯುತ್ತಿದ್ದಾರೆ ಎಂದು ಹೇಳುವುದು ಅಧಿಕಾರಿಗಳ ಕೆಲಸವಲ್ಲ. ಲಸಿಕೆ ಹಾಕಿಸುವಂತೆ ರೈತರ ಮನ ಒಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರದಿಂದ ಇದುವರೆಗೆ 142 ಹಸುಗಳು ಸಾವಿಗೀಡಾಗಿದ್ದು, 845 ಹಸುಗಳು ಚೇತರಿಸಿಕೊಳ್ಳುತ್ತಿವೆ. ಆದರೆ ಇದು ಸ್ಪಷ್ಟ ಅಂಕಿ ಅಂಶವಲ್ಲ. ಏಕೆಂದರೆ ಸ್ಪಷ್ಟ ಅಂಕಿ ಅಂಶವು ಪಶುವೈದ್ಯ ಇಲಾಖೆಯಲ್ಲಿ ಇಲ್ಲ. ಇಲಾಖೆ ಹೇಳುತ್ತಿರುವುದಕ್ಕಿಂತಲೂ ಹೆಚ್ಚು ಹಸುಗಳು ಸಾವಿಗೀಡಾಗಿವೆ  ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಮಾಹಿತಿ ನೀಡಿದರು.

ತಾವು ಬೆಳಿಗ್ಗೆ ಕೆಲವು ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಹಸುಗಳಿಗೆ ಬಂದಿರುವ ಕಾಲು ಬಾಯಿ ಜ್ವರದ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು. ಪಶುವೈದ್ಯರು ಸಮರ್ಪಕ ರೀತಿಯಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಸರಿಯಾದ ವರದಿಯನ್ನು ಕೊಡುತ್ತಿಲ್ಲ ಎಂದೂ ಹೇಳಿದರು.

ಅವರ ವಿವರಣೆಯಿಂದ ಅಸಮಾಧಾನಗೊಂಡ ಸಚಿವರು ಮತ್ತೆ ಅಧಿಕಾರಿ ಕಡೆಗೆ ತಿರುಗಿ, ಒಂದು ವಾರದೊಳಗೆ ಸ್ಪಷ್ಟ ಚಿತ್ರಣದ ವರದಿ ಸಲ್ಲಿಸಿ. ಆ ಬಳಿಕ ಹಸುಗಳು ಸಾವಿಗೀಡಾದರೆ ನಿಮ್ಮನ್ನೇ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಜ್ವರವು ಸಾಂಕ್ರಾಮಿಕವಾಗಿದೆ ಎಂದು ವರದಿ ನೀಡಿದರೆ ರೈತರಿಗೆ ಪರಿಹಾರ ನೀಡಲು ಸಾಧ್ಯ­ವಿದೆ ಎಂಬ ಜಿಲ್ಲಾಧಿಕಾರಿ ಸಲಹೆಯನ್ನು ಒಪ್ಪಿದ ಸಚಿವರು, ಅದೇ ರೀತಿ ವರದಿ ನೀಡುವಂತೆ ಅಧಿಕಾರಿಗೆ ಸೂಚಿಸಿದರು.

ನೀರು: ತಾಂತ್ರಿಕ ಕಾರಣಗಳನ್ನು ನೀಡಿ ಕುಡಿ­ಯುವ ನೀರಿನ ಯೋಜನೆಗಳನ್ನು ಸ್ಥಗಿತಗೊಳಿ­ಸುವುದು ಅಥವಾ ಅನುಷ್ಠಾನವನ್ನು ಮುಂದೂ­ಡ­ಬಾರದು. ಕಿರಿಯ ಎಂಜಿನಿಯರ್‌­ಗಳಿಗೂ ಮುಖ್ಯ ಜವಾಬ್ದಾರಿಗಳನ್ನು ವಹಿಸಬೇಕು. ಒಂದೂವರೆ ತಿಂಗಳೊಳಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲೇಬೇಕು ಎಂದು ಸಚಿವರು ಸೂಚಿಸಿದರು.

37 ಗ್ರಾಮಗಳಲ್ಲಿ ಟಾಂಕರ್ ನೀರು ಮತ್ತು 38 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ನೀರನ್ನು ಪೂರೈಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೂ 15 ಲಕ್ಷ ರೂಪಾಯಿಯನ್ನು ಜಿಲ್ಲಾ ಪಂಚಾಯಿತಿಯು ನೀರಿಗೆಂದೇ ಮೀಸ­ಲಿಟ್ಟಿದೆ. ಹೆಚ್ಚು ಬೇಕೆಂದರೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ವರ್ತೂರು ಕೆರೆ ನೀರು: ಬೆಂಗಳೂರು ಗ್ರಾಮಾಂ­ತರ ಜಿಲ್ಲೆಯ ವರ್ತೂರು ಕೆರೆಯ ಮೂಲಕ ಹರಿದುಹೋಗುತ್ತಿರುವ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ತಾಲ್ಲೂಕಿಗೆ ಹರಿ-­ಸಿದರೆ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಇದಕ್ಕೆ ಕೇವಲ ` 7--ರಿಂದ 8 ಕೋಟಿ ಬೇಕಾ­­ಗಬಹುದು ಎಂದು ಸಚಿವರ ಗಮನ ಸೆಳೆದರು.

ಸುಮಾರು 240 ಕೋಟಿ ವೆಚ್ಚದಲ್ಲಿ ಯರ­ಗೋಳು ಯೋಜನೆಯನ್ನು ಜಾರಿ ಮಾಡ­ಲಾಗುತ್ತಿದೆ. ಆದರೆ ಅಣೆಕಟ್ಟು ತುಂಬಿದರೆ ಎಷ್ಟು ನೀರು ದೊರಕಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಇಂಥ ಸಂದರ್ಭ­ದಲ್ಲಿ ಕಡಿಮೆ ವೆಚ್ಚದ ಯೋಜನೆಯನ್ನು ಜಾರಿಗೊಳಿಸಿದರೆ ಜಿಲ್ಲೆಗೆ ಅನುಕೂಲವಾಗ­ಬಹುದು ಎಂದು ಅವರು ಹೇಳಿದರು. ಆ ಕುರಿತು ಪರಿಶೀಲಿಸುವುದಾಗಿ ಸಚಿವರು ಹೇಳಿ­ದರು.

ಬರ ಘೋಷಣೆ ಕಷ್ಟ: ಹತ್ತು ದಿನಗಳಿಂದ ಮಳೆ ಬೀಳುತ್ತಿರುವ ಹಿನ್ನೆಲೆ­ಯಲ್ಲಿ ತೇವಾಂಶದ ಕೊರತೆ ನೀಗಿದೆ. ಆದರೆ ಜಿಲ್ಲೆಗೆ ಅಗತ್ಯವಿರು­ವಷ್ಟು ಮಳೆ ಬಂದಿಲ್ಲ. ಆದರೂ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವುದು ಕಷ್ಟವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಮಳೆ ಬೀಳುವ ಮುನ್ನ ಇದ್ದ ಸನ್ನಿವೇಶದ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬರಗಾಲ ಘೋಷಣೆಯಾದರೆ ರೈತರಿಗೆ ಕೃಷಿ ಪರಿ­ಕರಗಳನ್ನು ಕೊಳ್ಳಲು ಸಬ್ಸಿಡಿ ಹಣ ದೊರಕುತ್ತದೆ ಎಂದೂ ಹೇಳಿದರು.

ಸಭೆ ನಡೆಸಿ: ಜೈವಿಕ ಗೊಬ್ಬರದ ಕುರಿತು ರೈತರಲ್ಲಿ ಮೂಡಿರುವ ಗೊಂದಲದ ಹಿನ್ನೆಲೆಯಲ್ಲಿ ಗೊಬ್ಬರ ಮಾರಾಟಗಾರರು ಮತ್ತು ರೈತ ಪ್ರಮುಖರ ಸಭೆ ನಡೆಸಲು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.