ADVERTISEMENT

ಶಾಪಗ್ರಸ್ಥ ಮಾಲೂರು ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 10:00 IST
Last Updated 4 ಅಕ್ಟೋಬರ್ 2011, 10:00 IST
ಶಾಪಗ್ರಸ್ಥ ಮಾಲೂರು ಬಸ್ ನಿಲ್ದಾಣ
ಶಾಪಗ್ರಸ್ಥ ಮಾಲೂರು ಬಸ್ ನಿಲ್ದಾಣ   

ಮಾಲೂರು: ಪಟ್ಟಣದ ಹೃದಯ ಭಾಗದಲ್ಲಿನ ಬಸ್ ನಿಲ್ದಾಣ ದಶಕಗಳಿಂದ ಮೂಲ ಸೌಕರ್ಯದಿಂದ ವಂಚಿತ. ಇದರ ಪರಿಣಾಮ ನಿಲ್ದಾಣ ಪ್ರಯಾಣಿಕರ ಪಾಲಿಗೆ ಶಾಪವಾಗಿದೆ. ಪ್ರಯಾಣಿಕರು ನಿಲ್ಲಲು ಇಲ್ಲಿ ಜಾಗವಿಲ್ಲ. ಎಚ್ಚರ ತಪ್ಪಿದರೆ ಬಸ್ಸುಗಳಡಿ ಸಿಲುಕುವ ಅಪಾಯವೇ ಹೆಚ್ಚಾಗಿದೆ.

1987ರಲ್ಲಿ ಅಂದಿನ ಪುರಸಭಾ ಅಧ್ಯಕ್ಷ ಎ.ನಾಗರಾಜು ಅವರ ಯತ್ನದಿಂದ ಕಾರಂಜಿ ಕಟ್ಟೆ (ಕೆರೆ) ಪುರಸಭೆ  ವತಿಯಿಂದ ಬಸ್ ನಿಲ್ದಾಣ ವಾಯಿತು.

25 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ತಾಲ್ಲೂಕಿನ ಜನಸಾಂದ್ರತೆ ಹೆಚ್ಚಾಗಿದೆ. ಆದರೆ ಅಗತ್ಯಕ್ಕನುಗುಣವಾಗಿ ನಿಲ್ದಾಣಕ್ಕೆ ಸೌಕರ್ಯ ಒದಗಿಸಲಾಗಿಲ್ಲ.  ನಿಲ್ದಾಣದಲ್ಲಿ ವಿವಿಧ ರೀತಿಯ ಅಂಗಡಿಗಳೂ ಇರುವುದರಿಂದ ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲ. ಬೆಂಗಳೂರಿಗೆ ಕೇವಲ 48 ಕಿ.ಮೀ ದೂರದಲ್ಲಿರುವ ಕಾರಣ ಜನರು ಪ್ರತಿದಿನ ಬೆಂಗಳೂರಿಗೆ ಪ್ರಯಾಣಿಸುತ್ತಾರೆ.

ಶೌಚಾಲಯ, ಕುಡಿಯುವ ನೀರಿಗಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಮುಂದುವರಿದಿದೆ. ಇದಕ್ಕೆ ಕಾರಣ ಶೌಚಾಲಯ ಟೆಂಡರ್ ವಿಚಾರದಲ್ಲಿ ಪುರಸಭೆಗೂ ಮತ್ತು ಟೆಂಡರ್‌ದಾರರಿಗೂ ಗೊಂದಲ. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಪುರಸಭೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಹೀಗಾಗಿ ಪ್ರಯಾಣಿಕರು ಶೌಚಾಲಯ ದುರ್ನಾತ ಬೀರುತ್ತದೆ.

`ಸಮಯಕ್ಕೆ ಬಾರದ ಬಸ್‌ಗಳಿಂದ ಕಾದು ಕಾದು ಸುಸ್ತಾದರೆ ಬಾಯಾರಿಕೆಗೆ ನೀರಿನ ಸಿಗುವುದಿಲ್ಲ. ಅನಿವಾರ್ಯ ಇದ್ದಾಗ ಬಾಟಲಿ ನೀರನ್ನು ಪಡೆಯುವ ಅನಿವಾರ್ಯವಿದೆ ಎಂಬುದು~ ಪ್ರಯಾಣಿಕ  ರಾಮಣ್ಣ ಅವರ ಅಸಮಾಧಾನದ ನುಡಿ.

ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಉದ್ಯಾನದ ಸ್ಥಳದಲ್ಲಿನ ಸೊರಗಿವೆ. ಕೆಲವು ಅಸ್ತಿತ್ವ ಕಳೆದುಕೊಂಡಿವೆ.  ಈ ಉದ್ಯಾನ ಹಾಗೂ ಬಸ್ ನಿಲ್ದಾಣ ವಿಸ್ತರಣೆಗೆ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರ ಪ್ರಯತ್ನಕ್ಕೆ  ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. 

ಇದೇ ವೇಳೆ ಉದ್ಯಾನವನವನ್ನು  ಬಹಳಷ್ಟು ಮಂದಿ ಬಯಲು ಶೌಚಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಪರಿಣಾಮ  ಬಸ್ ನಿಲ್ದಾಣದಲ್ಲಿ ಎಲ್ಲೆಡೆಯೂ ದುರ್ನಾತ. ಈ ನಿಲ್ದಾಣದಲ್ಲಿ ಪ್ರತಿದಿನ 370 ರಾಜ್ಯ ಸಾರಿಗೆ ಬಸ್ಸುಗಳು ಇಲ್ಲಿ ಸಂಚರಿಸುತ್ತವೆ. 150 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ.

`ಸಾರಿಗೆ ನಿಯಂತ್ರಣಾ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿದೆ. ಕಿಟಕಿ ಬಾಗಿಲುಗಳು ಕೆಲಸಕ್ಕೆ ಬಾರದಾಗಿವೆ. ಪುರಸಭೆ ಹಾಗೂ ಸಾರಿಗೆ ನಿಗಮಕ್ಕೆ ಮೂಲ ಸೌಲಭ್ಯ ಕಲ್ಪಿಸುವಂತೆ  ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಸಂಚಾರ ನಿಯಂತ್ರಕ ಮುಕುಂದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.