ADVERTISEMENT

ಶಿಕ್ಷಕರ ನಿಯೋಜನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 8:21 IST
Last Updated 29 ಜನವರಿ 2013, 8:21 IST
ಶಿಕ್ಷಕರ ನಿಯೋಜನೆಗೆ ಒತ್ತಾಯಿಸಿ ಕೋಲಾರ ತಾಲ್ಲೂಕು ಪೆಮ್ಮಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಿಡಿಪಿಐ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ಮುಖಂಡರಾದ ಹೂಹಳ್ಳಿ ನಾಗರಾಜ್, ಪ್ರಜ್ವಲ್, ರೈತಸಂಘದ ಕೆ.ನಾರಾಯಣಗೌಡ, ಟಿ.ಎನ್.ನಾಗರಾಜ್, ಸುನೀಲ್‌ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕರ ನಿಯೋಜನೆಗೆ ಒತ್ತಾಯಿಸಿ ಕೋಲಾರ ತಾಲ್ಲೂಕು ಪೆಮ್ಮಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಿಡಿಪಿಐ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ಮುಖಂಡರಾದ ಹೂಹಳ್ಳಿ ನಾಗರಾಜ್, ಪ್ರಜ್ವಲ್, ರೈತಸಂಘದ ಕೆ.ನಾರಾಯಣಗೌಡ, ಟಿ.ಎನ್.ನಾಗರಾಜ್, ಸುನೀಲ್‌ಕುಮಾರ್ ಉಪಸ್ಥಿತರಿದ್ದರು.   

ಕೋಲಾರ: ಶಿಕ್ಷಕರನ್ನು ಕೂಡಲೇ ನಿಯೋಜಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಪೆಮ್ಮಶೆಟ್ಟಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಪೋಷಕರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಿಡಿಪಿಐ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಶಾಲೆಯಲ್ಲಿ 53 ವಿದ್ಯಾರ್ಥಿಗಳಿದ್ದು ಎರಡು ತಿಂಗಳಿಂದ ಒಬ್ಬರೇ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಈ ಹಿಂದೆ ಮೂವರು ಶಿಕ್ಷಕರಿದ್ದರು. ಕಾರಣಾಂತರಗಳಿಂದ ಸಹ ಶಿಕ್ಷಕ ಎನ್.ವಿ.ಮಧುಚಂದ್ರ ಅವರನ್ನು ಗುಟ್ಟಹಳ್ಳಿ ಶಾಲೆಗೆ ನಿಯೋಜಿಸಲಾಗಿದೆ. ಮತ್ತೊಬ್ಬ ಶಿಕ್ಷಕಿ ಎಂ.ಸವಿತಾ ಶಾಲೆಗೆ ಬರುತ್ತಿಲ್ಲ. ಶಿಕ್ಷಕರ ಕೊರತೆ ಬಗ್ಗೆ ಬಿಇಒ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸಂಘಟನೆಗಳ ಮುಖಂಡರು ದೂರಿದರು.

ಶಿಕ್ಷಕರ ಕೊರತೆಯನ್ನು ಕೂಡಲೇ ನೀಗಿಸಬೇಕು ಎಂದು ಕೋರಿ ಈಗಾಗಲೇ ಮುಖ್ಯ ಶಿಕ್ಷಕರು ಡಿಡಿಪಿಐ ಹಾಗೂ ಎಸ್‌ಡಿಎಂಸಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಒಬ್ಬರೇ ಶಿಕ್ಷಕರು 1ರಿಂದ 5ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು ಆಗದೆ ಪರದಾಡುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತು ಗ್ರಾಮದಲ್ಲಿ ಶಾಲೆಯ ಘನತೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಇನ್ನಾದರೂ ಸಮಸ್ಯೆಯನ್ನು ಪರಿಹರಿಸಿ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಹೂಹಳ್ಳಿ ನಾಗರಾಜ್, ಪ್ರಜ್ವಲ್, ರೈತಸಂಘದ ಕೆ.ನಾರಾಯಣಗೌಡ, ಗ್ರಾಮಸ್ಥರಾದ ಬೈರಪ್ಪ, ಟಿ.ಎನ್.ನಾಗರಾಜ್, ಸುನೀಲ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.