ADVERTISEMENT

ಸಚಿವರ ತಂಡಕ್ಕೆ ಖಾಲಿ ಕೊಡಗಳ ಸ್ವಾಗತ, ಪ್ರತಿಭಟನೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 10:20 IST
Last Updated 11 ಏಪ್ರಿಲ್ 2012, 10:20 IST

ಕೋಲಾರ: ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಹೊಸ ಕೊಳವೆಬಾವಿಗಳೂ ವಿಫಲವಾಗುತ್ತಿವೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಜಾನುವಾರುಗಳಿಗೆ ಮೇವು ಸಾಕಾಗುತ್ತಿಲ್ಲ. ನೀರು-ಮೇವಿನ ಕೊರತೆ ನೀಗಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟ ಎದುರಾಗುತ್ತದೆ. ಈಗಾಗಲೇ ಬಸವಳಿದಿದ್ದೇವೆ....

ಬರಪರಿಸ್ಥಿತಿ ಅಧ್ಯಯನಕ್ಕೆಂದು ಜಿಲ್ಲೆಗೆ ಮಂಗಳವಾರ ಭೇಟಿ ನೀಡಿದ್ದ ಸಚಿವರಾದ ಎಸ್.ಸುರೇಶ್‌ಕುಮಾರ್, ರವೀಂದ್ರನಾಥ್, ಆರ್.ಅಶೋಕ್ ಮತ್ತು ಬಿ.ಎನ್.ಬಚ್ಚೇಗೌಡರ ತಂಡಕ್ಕೆ ಹಲವು ಗ್ರಾಮಗಳ ಜನ, ಮುಖಂಡರು ಪದೇಪದೇ ಹೇಳಿದ ಮಾತುಗಳಿವು. ಬಿರುಬಿಸಿಲಿನಲ್ಲಿ ನಿಂತ ಸಚಿವರ ತಂಡವು ಗ್ರಾಮಸ್ಥರ ಅಸಮಾಧಾನದ ಮಾತುಗಳ ಜೊತೆಗೆ ಪ್ರತಿಭಟನೆಯ ಬಿಸಿಯನ್ನೂ ಎದುರಿಸಬೇಕಾಯಿತು.

ಮಾತುಗಳಲ್ಲಿ ವ್ಯತ್ಯಾಸವಿಲ್ಲದಿದ್ದರೂ ಗ್ರಾಮಸ್ಥರ ಮುಖಭಾವ, ಸಂಕಟ, ವೇದನೆ, ಅಸಮಾಧಾನ ಪರಿಪರಿಯಾಗಿ ಪ್ರಕಟಗೊಂಡವು. ಸಚಿವರು ಭೇಟಿ ನೀಡಿದ ಪ್ರತಿ ಗ್ರಾಮದಲ್ಲೂ ಜನ ಕುಡಿಯುವ ನೀರು, ಮೇವಿನ ಸಮಸ್ಯೆಗಳನ್ನೇ ಹೇಳಿದರು.

ಸಾವಿರಕ್ಕೂ ಹೆಚ್ಚು ಅಡಿ ಆಳದಿಂದ ನೀರೆತ್ತುವ ಸಾಮರ್ಥ್ಯದ ಪಂಪ್-ಮೋಟರ್ ಅಳವಡಿಸದೇ ಇರುವುದು ಸಮಸ್ಯೆ ಹೆಚ್ಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ ಉದ್ಯೋಗಖಾತ್ರಿ ಕೂಲಿ ಹಣ ನೀಡದಿರುವುದು ಮತ್ತು ಕೂಲಿ ಕೆಲಸ ನೀಡದಿರುವ ಕುರಿತು ದೂರಿದರು. ಜಿಲ್ಲೆಯ ರೈತರ ಸಾಲಮನ್ನಾ ಮಾಡಬೇಕು. ಪಡಿತರ ಚೀಟಿದಾರರಿಗೆ ಮಾಸಿಕ 40ಕೆಜಿ ಅಕ್ಕಿ ನೀಡಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿ ಗ್ರಾಮದಲ್ಲೂ ಕೆಲವೇ ನಿಮಿಷ ಸಚಿವರು ನಿಂತು ಆಲಿಸಿದ್ದರಿಂದ ಹೆಚ್ಚು ವಿವರಿಸಲು ಜನರಿಗೆ ಅವಕಾಶ ದೊರಕಲಿಲ್ಲ. ನೂಕಾಟ-ತಳ್ಳಾಟಗಳ ನಡುವೆ ಸಚಿವರು ಬಂದು ಹೋಗಿದ್ದು ಗೊತ್ತಾಗದೇ ಇರುವ ಸ್ಥಿತಿಯಲ್ಲೂ ಹಲವರು ಇದ್ದರು.

ಪ್ರವಾಸಿ ಮಂದಿರಕ್ಕೆ ಬಂದ ಸಚಿವರ ತಂಡ ಪ್ರವಾಸವನ್ನು ಆರಂಭಿಸಲೆಂದು ಮುಖ್ಯರಸ್ತೆಗೆ ಬರುವ ಮೊದಲೇ ಗೇಟಿನಲ್ಲಿ ನಿಂತ ತಾಲ್ಲೂಕಿನ ತೊಂಡಾಲ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದು ಮನವಿ ಸಲ್ಲಿಸಿದರು.

ಸುಗಟೂರು: ತಾಲ್ಲೂಕಿನ ಸುಗಟೂರಿಗೆ ಬಂದ ಸಚಿವರ ತಂಡಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಸದಸ್ಯ ವಿಶ್ವನಾಥ್ ನೇತೃತ್ವದ ತಂಡದವರು ನೀರು ಮತ್ತು ಮೇವಿನ ಸಮಸ್ಯೆ ಬಗ್ಗೆ ವಿವರಿಸಿದರು. 6330 ಜನಸಂಖ್ಯೆಯುಳ್ಳ ಗ್ರಾಮದಲ್ಲಿರುವ 8 ಕೊಳವೆಬಾವಿಗಳ ಪೈಕಿ 3 ಮಾತ್ರ ಕೆಲಸ ಮಾಡುತ್ತಿವೆ. ಉಳಿದ ಐದರಲ್ಲಿ ನೀರು ಕಡಿಮೆ ಇದೆ. 25 ಎಚ್‌ಪಿ ಮೋಟರ್ ಅಳವಡಿಸಿದರೆ ಮಾತ್ರ ನೀರು ದೊರಕುತ್ತದೆ ಎಂದರು.
ಉದ್ಯೋಗಖಾತ್ರಿ ಕೂಲಿ ಸಿಕ್ಕಿಲ್ಲ ಎಂದೂ ದೂರಿದರು.

ಜನಘಟ್ಟ: ಜನಘಟ್ಟಕ್ಕೆ ಬಂದ ಸಚಿವರ ತಂಡವನ್ನು, ಬೀದಿಯಲ್ಲಿ ಸಾಲಾಗಿ ನಿಂತು ನೀರು ಸಂಗ್ರಹಿಸುತ್ತಿದ್ದ ಮಹಿಳೆಯರ ಉದ್ದನೆಯ ಸಾಲು ಸ್ವಾಗತಿಸಿತು. ನೇರವಾಗಿ ಅಲ್ಲಿಗೇ ತೆರಳಿದ ಸಚಿವ ಸುರೇಶ್‌ಕುಮಾರ್ ಮಹಿಳೆಯರಿಂದ ಮಾಹಿತಿ ಪಡೆದರು. ಅಗತ್ಯವಿರುವಷ್ಟು ಮೇವು ದೊರಕುತ್ತಿಲ್ಲ. ಇರುವ ಎರಡು ಕೊಳವೆಬಾವಿಗಳ ನೀರು ಸಾಕಾಗುತ್ತಿಲ್ಲ. ವಿದ್ಯುತ್ ಪೂರೈಕೆ ಅಸಮರ್ಪಕವಾಗಿದೆ ಎಂದು ಪ್ರಾಂತ ರೈತ ಸಂಘದ ಟಿ.ಎಂ.ವೆಂಕಟೇಶ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.

ಮುದುವಾಡಿ: ಮುದುವಾಡಿಗೆ ಬಂದ ತಂಡಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಸಮಸ್ಯೆ ಕುರಿತು ವಿವರಿಸಿದರು. ರೈತರ ಸಾಲಮನ್ನಾ ಮಾಡಬೇಕು. ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 40 ಕೆಜಿ ಅಕ್ಕಿ ಕೊಡಬೇಕು. ಶಾಶ್ವತ ನೀರಾವರಿ ಕಲ್ಪಿಸಬೇಕು. ಎರಡು ವರ್ಷದ ಉದ್ಯೋಗಖಾತ್ರಿ ಯೋಜನೆಯ ಕೂಲಿ ಕೊಡಬೇಕು ಎಂದು ಆಗ್ರಹಿಸಿದರು.

ಜನರ ಮಾತು ಆಲಿಸಿದ ಸಚಿವರ ತಂಡ ತಮ್ಮ ವಾಹನ ಏರಿ ಮುಂದೆ ಸಾಗಲು ಯತ್ನಿಸುತ್ತಿದ್ದಂತೆಯೇ ಖಾಲಿ ಬಿಂದಿಗೆ ಪ್ರದರ್ಶಿಸಿದ ಮಹಿಳೆಯರು ರಸ್ತೆ ತಡೆಗೆ ಮುಂದಾದ ಘಟನೆಯೂ ನಡೆಯಿತು. ನೀರಿನ ಸಮಸ್ಯೆ ನಿವಾರಿಸುವವರೆಗೂ ಸಚಿವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಆಗ್ರಹಿಸಿದರು. ನಂತರ ಸನ್ನಿವೇಶವನ್ನು ನಿಯಂತ್ರಿಸಲಾಯಿತು.

ಪನಸಮಾಕನಹಳ್ಳಿ:
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿಗೆ ಭೇಟಿ ನೀಡಿದ ತಂಡಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಸಮಸ್ಯೆ ಕುರಿತು ವಿವರಿಸಿದರು. ಅಲ್ಲಿ ಹೆಚ್ಚು ಚರ್ಚೆ ನಡೆಯಲಿಲ್ಲ. ಕೆಲವೇ ನಿಮಿಷಗಳ ಬಳಿಕ ತಂಡವು ತಾಲ್ಲೂಕಿನ ಮೀಸಗಾನಹಳ್ಳಿಗೆ ಪ್ರಯಾಣ ಬೆಳೆಸಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಎಂ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಬಿ,.ಪಿ.ವೆಂಕಟಮುನಿಯಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ, ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸಿಇಒ ಪಿ.ರಾಜೇಂದ್ರ ಚೋಳನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ತಹಶೀಲ್ದಾರ್ ಮುನಿವೀರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ, ಪ್ರಧಾನ ಕಾರ್ಯದರ್ಶಿ ನೀಲಿ ಜಯಶಂಕರ್, ಮುಖಂಡರಾದ ವೆಂಕಟೇಶಮೌರ್ಯ, ಬೆಗ್ಲಿ ಸಿರಾಜ್, ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.