ADVERTISEMENT

ಸದೃಢ ದೇಶಕ್ಕೆ ಯೋಗ್ಯರ ಆಯ್ಕೆ ಮಾಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 9:37 IST
Last Updated 12 ಏಪ್ರಿಲ್ 2018, 9:37 IST

ಮುಳಬಾಗಿಲು: ಸದೃಢ ದೇಶ ನಿರ್ಮಾಣಕ್ಕೆ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಇದಕ್ಕೆ ಸಾರ್ವತ್ರಿಕ ಚುನಾವಣೆ ಉತ್ತಮ ವೇದಿಕೆ ಎಂದು ಚುನಾವಣಾ ಮಾಸ್ಟರ್ ತರಬೇತುದಾರ ಮಂಜುನಾಥ್ ಹೇಳಿದರು.

ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ ಕುರಿತು ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಲು ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿ ಆಯ್ಕೆ ಮಾಡಬೇಕು. ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಚುನಾವಣೆಯಲ್ಲಿ ನಿರ್ಭೀತರಾಗಿ ಯಾವುದೇ ಆಮಿಷಕ್ಕೆ ಬಲಿಯಾಗದೆ ಮತ ಹಾಕಬೇಕು. ಚುನಾವಣಾ ಅಕ್ರಮಗಳ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ನ್ಯಾಯಯುತ ಚುನಾವಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ADVERTISEMENT

‘ಜನತಂತ್ರ ವ್ಯವಸ್ಥೆಯಲ್ಲಿ ಯುವಕ ಯುವತಿಯರ ಪಾತ್ರ ನಿರ್ಣಾಯಕ. ಮತದಾರರು ಸ್ವಪ್ರೇರಣೆಯಿಂದ ಮತ ಹಾಕಿದರೆ ಸುಭದ್ರ ಸರ್ಕಾರ ರಚನೆಯಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಗರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಸುಶಿಕ್ಷಿತರೇ ಮತದಾನ ಮಾಡುತ್ತಿಲ್ಲ. ಈ ಬಾರಿ ಆ ರೀತಿ ಆಗಬಾರದು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನವಾಗಬೇಕು’ ಎಂದು ನಗರಸಭೆ ಆಯುಕ್ತ ಬಿ.ಪ್ರಹ್ಲಾದ್ ಹೇಳಿದರು.

ನಗರಸಭೆ ನೌಕರರಾದ ಆರ್.ವೇಣುಗೋಪಾಲ್, ಆರ್.ಶೋಭನ್‌ಬಾಬು, ಆರೋಗ್ಯ ನಿರೀಕ್ಷಕ ಶಿವಾರೆಡ್ಡಿ, ಕರ ಸಂಗ್ರಹಗಾರ ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.