ADVERTISEMENT

ಸರ್ಕಾರಿ ಜಮೀನು ಕಬಳಿಸಲು ಪತಿಗೆ ನೆರವು

ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:20 IST
Last Updated 17 ಏಪ್ರಿಲ್ 2018, 9:20 IST

ಕೋಲಾರ: ‘ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸ್ವಹಿತಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಪತಿ ಡೊಮನಿಕ್ ಅವರಿಗೆ ಅಕ್ರಮ ದಾಖಲೆ ಸೃಷ್ಟಿಸಿಕೊಟ್ಟು ಸರ್ಕಾರಿ ಜಮೀನು ಕಬಳಿಸಲು ನೆರವಾಗಿದ್ದಾರೆ’ ಎಂದು ಬಹುಜನ ಸಂಘ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರಿ ನೌಕರಿಯಲ್ಲಿರುವ ಡೊಮನಿಕ್ ಅವರು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವಿಜಲಾಪುರ ಗ್ರಾಮದ ಸರ್ವೆ ಸಂಖ್ಯೆ 116-/1ರಲ್ಲಿರುವ 2 ಎಕರೆ 29 ಗುಂಟೆ ಜಮೀನು ಖರೀದಿಸಲು ಭೂ ಸುಧಾರಣಾ ಕಾಯ್ದೆಯಡಿ ಅನುಮತಿ ಕೋರಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು’ ಎಂದು ಹೇಳಿದರು.

‘ವಿದ್ಯಾಕುಮಾರಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಮುಳಬಾಗಿಲು ತಹಶೀಲ್ದಾರ್ ಮೇಲೆ ಒತ್ತಡ ಹೇರಿ ಪ್ರಸ್ತಾವ ಪಡೆದುಕೊಂಡು ಅರ್ಜಿ ವಿಚಾರಣೆ ನಡೆಸದೆ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಡೊಮನಿಕ್‌ರ ವಂಶವೃಕ್ಷ ಪರಿಶೀಲಿಸದೆ, ಕುಟುಂಬದ ಆದಾಯವನ್ನು ದಾಖಲೆಪತ್ರ ಸಮೇತ ಅರಿಯದೆ ಮತ್ತು ಕುಟುಂಬ ಸದಸ್ಯರ ವಿವರವನ್ನು ಮುಚ್ಚಿಟ್ಟು ಭೂ ಸುಧಾರಣೆ ಕಾಯ್ದೆ ಉಲ್ಲಂಘಿಸಿ ಜಮೀನು ಖರೀದಿಗೆ ಅನುಮತಿ ನೀಡಿದ್ದಾರೆ’ ಎಂದು ದೂರಿದರು.

ADVERTISEMENT

‘ಜಮೀನಿನ ಕ್ರಯಪತ್ರದಲ್ಲಿ ₹ 8 ಲಕ್ಷಕ್ಕೆ ಜಮೀನು ಖರೀದಿಸಿರುವುದಾಗಿ ನಮೂದಿಸಲಾಗಿದೆ. ಆದರೆ, ಆ ಭಾಗದಲ್ಲಿ ಭೂಮಿ ಬೆಲೆ ಎಕರೆಗೆ ಸುಮಾರು ₹ 20 ಲಕ್ಷವಿದೆ. ನೊಂದಣಿ ಶುಲ್ಕ ಉಳಿಸುವ ಉದ್ದೇಶಕ್ಕಾಗಿ ಕ್ರಯಪತ್ರದಲ್ಲಿ ಸುಳ್ಳು ಮಾಹಿತಿ ನಮೂದಿಸಿ ಸರ್ಕಾರಕ್ಕೆ ವಂಚಿಸಲಾಗಿದೆ. ಒಟ್ಟಾರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಜಮೀನಿಗೆ ರಸ್ತೆ ಸಂಪರ್ಕವಿಲ್ಲದ ಕಾರಣ ಹೆಚ್ಚುವರಿ ಜಿಲ್ಲಾಧಿಕಾರಿಯು ತಮ್ಮ ಪ್ರಭಾವ ಬಳಸಿ ಪತಿಗೆ ಅನುಕೂಲ ಮಾಡಿಕೊಡಲು ಸರ್ವೆ ಸಂಖ್ಯೆ 7ರಲ್ಲಿನ ಸುಮಾರು ಅರ್ಧ ಎಕರೆ ಸರ್ಕಾರಿ ಜಮೀನಿನ ಒತ್ತುವರಿಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಸುತ್ತಮುತ್ತಲ ರೈತರಿಗೆ ತೊಂದರೆಯಾಗಿದೆ. ಡೊಮನಿಕ್‌ ಸರ್ವೆ ಸಂಖ್ಯೆ 6ರ ಗೋಮಾಳದಲ್ಲಿ ಒಂದು ಎಕರೆಗೂ ಹೆಚ್ಚು ಜಮೀನನ್ನು ಅತಿಕ್ರಮಿಸಿಕೊಂಡಿದ್ದಾರೆ. ರಸ್ತೆ ಹಾಗೂ ಒತ್ತುವರಿ ಗೋಮಾಳದ ಜಾಗ ಸೇರಿಸಿ ತಂತಿ ಬೇಲಿ ಹಾಕಿದ್ದಾರೆ’ ಎಂದು ದೂರಿದರು.

ಹೋರಾಟದ ಎಚ್ಚರಿಕೆ: ‘ಜಿಲ್ಲಾಧಿಕಾರಿಯು ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಬೇಕು. ಅಕ್ರಮ ಎಸಗಿರುವ ವಿದ್ಯಾಕುಮಾರಿ ಮತ್ತು ಡೊಮನಿಕ್‌ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಸದಸ್ಯರಾದ ರಾಮು, ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.