ADVERTISEMENT

ಸರ್ಕಾರಿ ಶಾಲೆಗೆ ಸೇರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:35 IST
Last Updated 1 ಜೂನ್ 2011, 8:35 IST

ಶ್ರೀನಿವಾಸಪುರ: ಪೋಷಕರು ಕೀಳರಿಮೆ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಸಲಹೆ ಮಾಡಿದರು.

ಪಟ್ಟಣದ ರಂಗಾರಸ್ತೆ ಶಾಲೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ. ಈಗ ಇಂಗ್ಲೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಕಲಿಸಲಾಗುತ್ತಿದೆ. ಫಲಿತಾಂಶವೂ ಉತ್ತಮ ಮಟ್ಟದಲ್ಲಿದೆ.

ಪರಿಸ್ಥಿತಿ ಹೀಗಿರುವಾಗ ಪೋಷಕರು ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಅಗತ್ಯ ಕಂಡುಬರುವುದಿಲ್ಲ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್ ಖಲೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಪೋಷಕರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಸಿಕ್ಕಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಶಿಕ್ಷಕರು ಹಾಗೂ ಪೋಷಕರು ಪರಸ್ಪರ ಸಹಕಾರದಿಂದ ಪ್ರಾರಂಭದಿಂದಲೇ ಮಕ್ಕಳ ಕಲಿಕೆಗೆ ಪೂರ್ಣ ಗಮನ ಕೊಟ್ಟಲ್ಲಿ ಗುಣಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವುದು ಕಷ್ಟವಾಗುವುದಿಲ್ಲ. ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು. ಸರ್ಕಾರಿ ಶಾಲೆಗಳ ಘನತೆ ಗೌರವ ಶಿಕ್ಷರ ಕಾರ್ಯನಿರ್ವಹಣೆಯಲ್ಲಿ ಅಡಗಿದೆ. ಅದನ್ನು ಸಮರ್ಪಕವಾಗಿ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ನಾಗರಾಜ್, ಪುರಸಭಾಧ್ಯಕ್ಷ ಎಸ್.ಶ್ರೀನಿವಾಸಪ್ಪ ಮುಖ್ಯ ಶಿಕ್ಷಕ ದೇವರೆಡ್ಡಿ, ಎಸ್‌ಡಿಎಂಸಿ ಸದಸ್ಯ ಆಂಜಿನಪ್ಪ, ಶಿಕ್ಷಕರಾದ ನಾಗರಾಜ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.