ADVERTISEMENT

ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆರೋಪ: ಡಿಸಿ ಕಚೇರಿಗೆ ಮುತ್ತಿಗೆ, ಧರಣಿ

ರೈತ ಸಂಘ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:25 IST
Last Updated 11 ಡಿಸೆಂಬರ್ 2018, 11:25 IST
ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.   

ಕೋಲಾರ: ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

‘ಸರ್ಕಾರಿ ಮತ್ತು ಗುತ್ತಿಗೆ ಸರ್ವೆಯರ್‌ಗಳು ಲಂಚಕ್ಕಾಗಿ ರೈತರನ್ನು ಶೋಷಿಸುತ್ತಿದ್ದಾರೆ. ರೈತರು ಲಂಚ ಕೊಡದಿದ್ದರೆ ಸರ್ವೆಯರ್‌ಗಳು ಸರ್ವೆ ಕಾರ್ಯ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಸರ್ವೆಯರ್‌ಗಳು ರೈತರಿಂದ ಲಂಚದ ರೂಪದಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ತಾಲ್ಲೂಕು ಕಚೇರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸರ್ವೆಯರ್‌ಗಳ ಜತೆ ಶಾಮೀಲಾಗಿ ಲಂಚದ ದಂಧೆ ನಡೆಸುತ್ತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ಪೋಡಿ ಅದಾಲತ್‌ ಹಣ ಮಾಡುವ ದಂಧೆಯಾಗಿದೆ. ಅಧಿಕಾರಿಗಳು ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಮಾರಾಟ ಮಾಡುವ ಸಂಚು ರೂಪಿಸಿದ್ದಾರೆ. ಲಂಚ ಕೊಡದ ರೈತರ ಜಮೀನಿನ ಕಡತಗಳನ್ನೇ ಅಧಿಕಾರಿಗಳು ನಾಪತ್ತೆ ಮಾಡುತ್ತಾರೆ. ದಾಖಲೆಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸಿ ರೈತರಿಗೆ ತೊಂದರೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಭ್ರಷ್ಟಾಚಾರದ ಪಿತಾಮಹರು: ‘ರೈತರನ್ನು ಲಂಚಕ್ಕಾಗಿ ಶೋಷಿಸುವ ಅಧಿಕಾರಿಗಳು ಇಲಾಖೆಯನ್ನು ಸಂಪೂರ್ಣ ಭೂಗಳ್ಳರ ಆಸ್ತಿಯಾಗಿ ಮಾಡಲು ಹೊರಟಿದ್ದಾರೆ. ಭೂ ದಾಖಲೆಗಳ ಉಪ ನಿರ್ದೇಶಕರ (ಡಿಡಿಎಲ್‌ಆರ್‌) ಗೋಪಾಲಯ್ಯ ಹಾಗೂ ಕಚೇರಿ ಗುಮಾಸ್ತ ಸುರೇಶ್‌ ಭ್ರಷ್ಟಾಚಾರದ ಪಿತಾಮಹರು’ ಎಂದು ಧರಣಿನಿರತರು ಆರೋಪಿಸಿದರು.

‘ಅಧಿಕಾರಿಗಳು ಸರ್ವೆ ಇಲಾಖೆಯನ್ನು ಸ್ವಂತ ಆಸ್ತಿ ಮಾಡಿಕೊಂಡು ರೈತರನ್ನು ಅಲೆಸುತ್ತಿದ್ದಾರೆ. ಅಧಿಕಾರಿಗಳು ಬಡವರ ಜಮೀನಿನ ನಕಲಿ ದಾಖಲೆಪತ್ರ ಸೃಷ್ಟಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಕ್ರಮವಾಗಿ ಪರಭಾರೆ ಮಾಡುತ್ತಿದ್ದಾರೆ. ಭೂ ಅಕ್ರಮದ ವಿರುದ್ಧ ದೂರು ನೀಡುವವರಿಗೆ ಪ್ರಾಣ ಬೆದರಿಕೆ ಹಾಕಲಾಗುತ್ತಿದೆ’ ಎಂದು ಕಿಡಿಕಾರಿದರು.

ತನಿಖೆ ನಡೆಸಿ: ‘ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟ ಸರ್ವೆಯರ್‌ಗಳನ್ನು ಅಮಾನತು ಮಾಡಬೇಕು. ಡಿಡಿಎಲ್ಆರ್‌ ಗೋಪಾಲಯ್ಯ ಹಾಗೂ ಗುಮಾಸ್ತ ಸುರೇಶ್‌ರನ್ನು ಅಮಾನತು ಮಾಡಬೇಕು. ಅವರ ಅಕ್ರಮಗಳ ಬಗ್ಗೆ ಸಿಐಡಿ ತನಿಖೆ ನಡೆಸಬೇಕು. ದರಖಾಸ್ತು ಕಡತಗಳ ದುರಸ್ತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಬೇಕು. ಜಮೀನಿನ ದಾಖಲೆಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಉಮಾಗೌಡ, ಮಂಜುನಾಥ್, ಕೃಷ್ಣೇಗೌಡ, ಮಂಜು, ಶ್ರೀನಾಥ್, ರಾಮಸ್ವಾಮಿ, ಗೋಪಾಲಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.