ADVERTISEMENT

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 7:45 IST
Last Updated 18 ಏಪ್ರಿಲ್ 2012, 7:45 IST

ಕೋಲಾರ: ರಾಜ್ಯದಲ್ಲೆ ಅತ್ಯಂತ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ತಾಲ್ಲೂಕಿನ ರೈತರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾವು ಬೆಳೆಗಾರರಿಗೆ ಶ್ರೀನಿವಾಸಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಾರ್ಡ್‌ನಲ್ಲಿ ಮೂಲಸೌಕರ್ಯ ಕಲ್ಪಿಸುವುದು, ದಲ್ಲಾಳಿಗಳ ಹಾವಳಿ ನಿಯಂತ್ರಿಸುವುದು, ಎಪಿಎಂಸಿ ಸುತ್ತ ಮುತ್ತ ಖಾಸಗಿ ಮಾರುಕಟ್ಟೆಯನ್ನು ನಿಯಂತ್ರಿಸು ವುದು ಮತ್ತು ಕೆಲವು ಖಾಸಗಿ ವ್ಯಕ್ತಿಗಳಿಗೆ ಈಗಾಗಲೇ ನೀಡಿರುವ ಪರವಾನಗಿ ರದ್ದುಪಡಿಸು ವುದು, ಎಲೆಕ್ಟ್ರಾನಿಕ್ ತೂಕದ ಯಂತ್ರ, ಧಾರಣೆ ಫಲಕವನ್ನು ಅಳವಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರಕ್ಕೆ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಜಿಲ್ಲಾ ಮಾವು ಬೆಳೆಗಾರರ ಮತ್ತು ಮಾರಾಟ ಗಾರರ ಸಂಘದ ಅಧ್ಯಕ್ಷ ಬಿ.ಎನ್. ಚಂದ್ರಾರೆಡ್ಡಿ, ಮಾವು ಬೆಳೆಗಾರರಾದ ಎನ್. ವೆಂಕಟಾಚಲ, ಪಿ.ವಿ.ವೆಂಕಟಸ್ವಾಮಿರೆಡ್ಡಿ, ಎ.ಶಂಕರ್ ರೆಡ್ಡಿ, ಓಬಲೇಶ್, ಅಶೋಕ್ ಕೃಷ್ಣಪ್ಪ, ಬಿ. ನಾರಾಯಣಸ್ವಾಮಿ, ಡಿ.ವಿ. ರಾಜಾರೆಡ್ಡಿ, ಎನ್. ನಾರಾಯಣಸ್ವಾಮಿ, ಬಿ.ಮುನಿಯಪ್ಪ ಮತ್ತು ಬಿ.ವೆಂಕಟರಾಮರೆಡ್ಡಿ ಒಟ್ಟಾಗಿ ವಕೀಲ ಎಂ. ಶಿವಪ್ರಕಾಶ್ ನೇತೃತ್ವದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ತೋಟಗಾರಿಕೆ, ಕೃಷಿ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು, ಎಪಿಎಂಸಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೀಯ ತೋಟಗಾರಿಕೆ ಮಂಡಲಿ ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕಾರ್ಯನಿರ್ವಾಹಕ ನಿರ್ದೇಶಕರು, ಮೈಸೂರಿನ ಸಿಎಫ್‌ಟಿಆರ್‌ಐ (ಸೆಂಟ್ರಲ್ ಫುಡ್ ಅಂಡ್ ಟೆಕ್ನಾಲಜಿ ರಿಸರ್ಚ್ ಇನ್ಸಿಟಿಟ್ಯೂಟ್), ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿ, ಶ್ರೀನಿವಾಸಪುರ ತಹಶೀಲ್ದಾರ್, ಎಪಿಎಂಸಿ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ 23 ಮಂದಿಯನ್ನು ಎದುರುದಾರರನ್ನಾಗಿ ಮಾಡಲಾಗಿದೆ.

ತೋಟಗಳಲ್ಲಿ ಬೆಳೆದು ತರುವ ಮಾವಿನ ಸಮರ್ಪಕ ಮಾರಾಟಕ್ಕೆ ಅನುಕೂಲ ಕಲ್ಪಿಸುವಲ್ಲಿ, ಬೆಳೆಗಾರರ ಹಿತ ಕಾಪಾಡುವಲ್ಲಿ ಎಪಿಎಂಸಿ ಮಾರು ಕಟ್ಟೆ ವಿಫಲವಾಗಿದೆ. ಪರಿಣಾಮವಾಗಿ ಮಧ್ಯವರ್ತಿಗಳು, ದಲ್ಲಾಳಿಗಳು, ಖಾಸಗಿ ವ್ಯಾಪಾರಿಗಳು ಸೇರಿದಂತೆ ಹಲವರು ಬೆಳೆಗಾರ ರಿಂದ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಸೌಕರ್ಯ ಕೊರತೆ: ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯಲಾಗುವ ಮಾವಿನ ಮಾರಾಟಕ್ಕೆ ಬೇಕಾದ ಮೂಲಸೌಕರ್ಯಗಳು 19 ಎಕರೆಯಷ್ಟಿರುವ ಯಾರ್ಡ್‌ನಲ್ಲಿ ಇಲ್ಲ. ಎಲೆಕ್ಟ್ರಾ ನಿಕ್ ತೂಕದ ಯಂತ್ರಗಳು,  ಸಮಿತಿ ನಿರ್ಧರಿಸಿದ ಅಥವಾ ಹರಾಜಿನಲ್ಲಿ ನಿಗದಿ ಮಾಡಲಾದ ಬೆಲೆಯನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಇಲ್ಲ.
 
ಸಮರ್ಪಕವಾದ ಬಿಲ್ ಮತ್ತು ಓಚರ್‌ಗಳನ್ನು ನೀಡುವ ವ್ಯವಸ್ಥೆ ಇಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ವಹಿವಾಟಿನ ಅಂಕಿ- ಅಂಶ ದಾಖಲೀಕರಣ ನಡೆಯುತ್ತಿಲ್ಲ. ಬೆಳಗಾರ ರಿಗೆ ಸಾರಿಗೆ ವಾಹನ ಪೂರೈಕೆ ಮಾಡುತ್ತಿಲ್ಲ. ಚೆಕ್‌ಪೋಸ್ಟ್‌ಗಳನ್ನು ಅಳವಡಿಸಿಲ್ಲ. ನೀರು, ಶೌಚಾ ಲಯ ವ್ಯವಸ್ಥೆ ಇಲ್ಲ. ಸಂಸ್ಕರಣ ಘಟಕ ಸ್ಥಾಪನೆಯಾಗಿಲ್ಲ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ರಾತ್ರಿ ಕಾರ್ಯಾಚರಣೆ: ಸಾಗಾಟಕ್ಕೆ ವಾಹನ ಸೌಕರ್ಯ ಸಮರ್ಪಕವಾಗಿ ಇಲ್ಲದಿರುವುದರಿಂದ ಬೆಳೆಗಾರರು ಮಾರುಕಟ್ಟೆಗೆ ಬರವ ವೇಳೆಗೆ ಸಂಜೆ ರಾತ್ರಿ ವೇಳೆಯಾಗಿರುತ್ತದೆ. ಅದನ್ನು ಅಲ್ಲಿಯೇ ಸುರಿದು ಹೋಗಬೇಕು.

ಬೆಳಿಗ್ಗೆ ಬಂದಾಗ ದಲ್ಲಾಳಿ ಹೇಳಿದ್ದೇ ತೂಕ, ನೀಡಿದ್ದೇ ಬೆಲೆಯಾಗಿರುತ್ತದೆ. ರಾತ್ರಿ ವೇಳೆಯೇ ಬಹಳಷ್ಟು ವಹಿವಾಟು ನಡೆಯುವಂಥ ಸನ್ನಿವೇಶವನ್ನು ಎಪಿಎಂಸಿ ದಲ್ಲಾಳಿಗಳು ನಿರ್ಮಿಸಿದ್ದಾರೆ. ಯಾವ ಮೂಲ ಸೌಕರ್ಯವೂ ಇಲ್ಲದಿರುವುದರಿಂದ ರಾತ್ರಿ ವೇಳೆ ಯಲ್ಲಿ ಬೆಳೆಗಾರರು ಇರಲು ಸಾಧ್ಯವಾಗದಿರು ವುದು ಸಂಕಟದ ಸಂಗತಿ ಎಂದು ದೂರಲಾಗಿದೆ.

ಬೆಲೆ ನಿಗದಿ: ಬೆಳೆಗಾರರು ತಂದ ಮಾವಿಗೆ ಕೆಲವು ಕಮಿಷನ್ ಏಜೆಂಟ್‌ಗಳು ಬೆಲೆ ಕಟ್ಟುತ್ತಾರೆ. ಅಷ್ಟೆ ಅಲ್ಲದೆ ಬೆಲೆ ಖಾತರಿ ಇರುವುದಿಲ್ಲ. ಕೂಡಲೇ ಹಣ ನೀಡುವುದಿಲ್ಲ. ವರ್ಷವಿಡೀ ಹಲವು ಕಂತಿನಲ್ಲಿ  ಬೆಳೆಗಾರರಿಗೆ ಹಣ ನೀಡಲಾಗುತ್ತದೆ. ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಮತ್ತು ಹೊರರಾಜ್ಯಗಳ ಮಾರುಕಟ್ಟೆಗಳಲ್ಲಿ ಮಾವಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವ ಅವಕಾಶವೂ ಬೆಳೆಗಾರರಿಗಿಲ್ಲ. ಅಂಥ ಬೆಲೆಪಟ್ಟಿಯಲ್ಲಿ ನಿಯಮಿತವಾಗಿ ಎಲೆಕ್ಟ್ರಾನಿಕ್ ಫಲಕಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆಯನ್ನು ಮಾಡದೆ ಎಪಿಎಂಸಿ ಬೆಳೆಗಾರರ ಶೋಷಣೆಗೆ ದಾರಿ ಮಾಡಿದೆ ಎಂದು ಆರೋಪಿಸಲಾಗಿದೆ.

ಖಾಸಗಿಯವರಿಗೆ ಅವಕಾಶ: ಎಪಿಎಂಸಿ ಕಾಯ್ದೆ ನಿಯಮಗಳನ್ನು ಮೀರಿ, ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಆಸುಪಾಸಿನಲ್ಲೆ ಖಾಸಗಿಯವರಿಗೂ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಅದರಿಂದ ಬೆಳೆಗಾರರಲ್ಲಿ ಗೊಂದಲ ಮೂಡುವುದರ ಜೊತೆಗೆ ಅನಾರೋಗ್ಯಕಾರಿಯಾದ ಪೈಪೋಟಿಗೂ ದಾರಿ ಮಾಡಿದಂತಾಗಿದೆ ಎಂದು ದೂರಲಾಗಿದೆ. ಕಳೆದ ವಾರ ಪ್ರಕರಣ ನ್ಯಾಯಾಧೀಶರ ಮುಂದೆ ಬಂದಿದ್ದು, ಮುಂದಿನ ವಿಚಾರಣೆ ಏ. 20ರಂದು ನಡೆಯಲಿದೆ.

ತೂಕದ ಯಂತ್ರ ಅಗತ್ಯ
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ತೂಕದಯಂತ್ರ ಅಳವಡಿಸಬೇಕು. ಧಾರಣೆ ಫಲಕ ಪ್ರದರ್ಶಿಸ ಬೇಕು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಬೇಕು. ಉಗ್ರಾಣಗಳನ್ನು ನಿರ್ಮಿಸಿ ಕೊಡಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
-ವಕೀಲ ಎಂ.ಶಿವಪ್ರಕಾಶ್

ಮೂಲಸೌಕರ್ಯ ಕಲ್ಪಿಸಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ. ರೈತ ರಿಂದ ಕಮಿಷನ್ ಪಡೆದು ವಂಚಿಸಲಾಗುತ್ತಿದೆ. ನೇರ ಮಾರಾಟಕ್ಕೂ ಅವಕಾಶ ವಿಲ್ಲ. ಸಂಸ್ಕರಣ ಘಟಕವಿಲ್ಲ. ಎಲೆಕ್ಟ್ರಾ ನಿಕ್ ತೂಕದ ಯಂತ್ರ ವಿಲ್ಲ. ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಈ ಸಮಸ್ಯೆ ಗಳ ನಿವಾರಣೆಗೆ ಎಪಿಎಂಸಿ ಸೇರಿದಂತೆ ಯಾರೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. ಹೀಗಾಗಿ ಬೆಳೆಗಾರರೆಲ್ಲ ಸೇರಿ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ.
-ಬಿ.ಎನ್.ಚಂದ್ರಾರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ- ಮಾರಾಟಗಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.