ADVERTISEMENT

ಸಾವಯವ ಗೊಬ್ಬರದ ಕಣಜ ವೆಲ್ವೆಟ್ ಬೀನ್ಸ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 6:00 IST
Last Updated 14 ಫೆಬ್ರುವರಿ 2012, 6:00 IST

ಶ್ರೀನಿವಾಸಪುರ: ರಾಂಪುರ ಗ್ರಾಮದ ಪರಿಸರವಾದಿ ಹಾಗೂ ಪ್ರಗತಿಪರ ರೈತ ಅಶೋಕ್ ಕುಮಾರ್ ತಮ್ಮ ಜಮೀನಲ್ಲಿ ವೆಲ್ವೆಟ್ ಬೀನ್ಸ್ ಬೆಳೆಯುವ ಮೂಲಕ ರಾಸಾಯನಿಕ ಗೊಬ್ಬರಕ್ಕೆ ಮಂಗಳ ಹಾಡಿದ್ದಾರೆ.

ವೆಲ್ವೆಟ್ ಬೀನ್ಸ್ ಆಫ್ರಿಕಾ ಮೂಲದ ಒಂದು ಬಳ್ಳಿ. ಗೊಬ್ಬರಕ್ಕಾಗಿ ಬೆಳೆಯುವ ಸಸ್ಯ. ಇದು ಕೀಟಗಳನ್ನು ನಿಯಂತ್ರಿಸುವ ಜೊತೆಗೆ ವಾತಾವರಣ ತಂಪಾಗಿಸುತ್ತದೆ. ಬೆಳೆಗಳಿಗೆ ಅಗತ್ಯವಾದ ಸಾರಜನಕ ಒದಗಿಸುತ್ತದೆ.

ಹರಡಿದ ಬಳ್ಳಿ ನೆಲವನ್ನು ಮುಚ್ಚಿ ಹೆಚ್ಚು ಕಾಲ ತೇವಾಂಶ ಉಳಿಯುವಂತೆ ಮಾಡುತ್ತದೆ. ಕಳೆಗಳನ್ನು ನಾಶಪಡಿಸುತ್ತದೆ. ಮಳೆಗೆ ಮಣ್ಣು ಕೊಚ್ಚಿಹೋಗುವುದನ್ನು ಸ್ವಲ್ಪಮಟ್ಟಿಗೆ ತಡೆಯುತ್ತದೆ. ತೋಟಗಳಿಗೆ ಜೀವಂತ ಬೇಲಿಯಾಗುತ್ತದೆ. ದನಗಳಿಗೆ ಮೇವಾಗುತ್ತದೆ.

ಪರಿಸರವಾದಿ ಹಾಗೂ ಕೃಷಿಕ ರಾಂಪುರ ಅಶೋಕ್ ಕುಮಾರ್ ಹೇಳುವಂತೆ ಈ ಸಸ್ಯಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ. ಸ್ವಲ್ಪ ತೇವದಲ್ಲಿ ಬೀಜ ನೆಟ್ಟರೂ ಮೊಳಕೆಯೊಡೆದು ಬೆಳೆಯುತ್ತದೆ. ಸವಳು ಅಥವಾ ಬಂಜರು ಭೂಮಿಯಲ್ಲೂ ಬೆಳೆಯಬಲ್ಲದು. ಉಗನಿ ಬಳ್ಳಿಯಂತೆ ಸಿಕ್ಕ ಮರ-ಗಿಡಗಳನ್ನು ಅಪ್ಪಿ ಬೆಳೆಯುತ್ತದೆ. ಗಿಡಮರ ಇಲ್ಲದಿದ್ದರೆ ನೆಲದ ಮೇಲೆಯೇ ಹುಲುಸಾಗಿ ಬೆಳೆಯುತ್ತದೆ.

ವೆಲ್ವೆಟ್ ಬೀನ್ಸ್  ಬಹುಪಯೋಗಿ ಸಸ್ಯ. ಇದು ಮೊಳಕೆಯೊಡೆಯುತ್ತಲೇ ಭೂಮಿಗೆ ಅಗತ್ಯವಾದ ಸಾರಜನಕ ಸರಬರಾಜು ಮಾಡತೊಡಗುತ್ತದೆ. ಬಳ್ಳಿಯ ಬೇರಿನ ಗಂಟುಗಳು ಮುಖ್ಯ ಬೆಳೆಗೆ ಬೇಕಾದ ಗೊಬ್ಬರವನ್ನು ಉಚಿತವಾಗಿ ಪೂರೈಸುತ್ತವೆ. ಬಳ್ಳಿ ದಟ್ಟವಾಗಿ ಹಬ್ಬುವುದರಿಂದ ಯಾವುದೇ ಕಳೆ ಬೆಳೆಯುವುದಿಲ್ಲ. ಬೆಳೆದರೂ ನೆರಳಲ್ಲಿ ಬಿದ್ದು ಸೊರಗಿಹೋಗುತ್ತದೆ.

ವೆಲ್ವೆಟ್ ಬೀನ್ಸ್ ಅನ್ನು ತೋಟದ ಬೆಳೆಗಳ ಮಧ್ಯೆ ಬೆಳೆಯಬಹುದು. ಹಾಗೆ ಮಾಡುವುದರಿಂದ ಬೆಳೆಗೆ ಗೊಬ್ಬರ ಸಿಗುತ್ತದೆ. ಬೇರು ಮಣ್ಣನ್ನು ಸಡಿಲ ಮಾಡುತ್ತದೆ. ಎರೆಹುಳುವಿನ ಕೆಲಸವನ್ನು ಈ ಬಳ್ಳಿ ಮಾಡುತ್ತದೆ. ಹಳದಿ ಬಣ್ಣಕ್ಕೆ ತಿರುಗಿ ಉದುರುವ ಎಲೆಗಳು ಮಣ್ಣು ಸೇರಿ ಗೊಬ್ಬರವಾಗಿ ಮಾರ್ಪಡುತ್ತವೆ. ಬೆಳೆಗೆ ಮಾರಕವಾಗಬಲ್ಲ ಹಾನಿಕಾರಕ ಕೀಟಗಳನ್ನು ಈ ಸಸ್ಯ ಆಕರ್ಷಿಸುತ್ತದೆ. ಆದ್ದರಿಂದ ಮುಖ್ಯ ಬೆಳೆ ಸೌಖ್ಯವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಈ ಸಸ್ಯವನ್ನು ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಅದರಲ್ಲೂ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಟೊಮೆಟೊ ಮತ್ತಿತರ ತರಕಾರಿಗಳನ್ನು ಬೆಳೆದು ಮಣ್ಣಿನ ಸಹಜ ಸತ್ವ ಹಾಳುಮಾಡಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಈ ಸಸ್ಯ ವರದಾನ.
 
ಹೆಚ್ಚು ವಿಸ್ತೀರ್ಣದಲ್ಲಿ ಮಾವನ್ನು ಬೆಳೆಯುವ ಶ್ರೀನಿವಾಸಪುರ ಮತ್ತಿತರ ಕೆಲವು ತಾಲ್ಲೂಕುಗಳಲ್ಲಿ ಈ ಸಸ್ಯವನ್ನು ಬೇಲಿಗಳ ಬದಿಯಲ್ಲಿ ಹಾಗೂ ಮಾವಿನ ಗಿಡ ಮರಗಳ ಮಧ್ಯೆ ಬೆಳೆಯಬಹುದು. ಬಳ್ಳಿ ದಟ್ಟವಾಗಿ ಹಬ್ಬಿದ ಮೇಲೆ ಹುರುಳಿ, ಅಲಸಂದೆ ಬೆಳೆಗಳನ್ನು ಕಟ್ಟರ್ ಬಳಸಿ ಮಣ್ಣಿಗೆ ಸೇರಿಸುವಂತೆ ಇದನ್ನೂ ಮಣ್ಣಿಗೆ ಸೇರಿಸಬಹುದು.

ಸಹಜ ಕೃಷಿಗೆ ಒತ್ತು ನೀಡಿರುವ ರಾಂಪುರ ಅಶೋಕ್ ಕುಮಾರ್ ತಮ್ಮ ತೋಟದ ಬೇಲಿಗೆ ವೆಲ್ವೆಟ್ ಬೀನ್ಸ್ ಹಬ್ಬಿಸಿದ್ದಾರೆ. ಗಿಡ ಮರಗಳ ಮಧ್ಯೆಯೂ ಬೆಳೆಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅವರು ತೋಟದಲ್ಲಿ ಯಾವುದೇ ಕಳೆ ಬೆಳೆದರೂ ಚಿಂತಿಸುವುದಿಲ್ಲ. ಅದನ್ನು ಇನ್ನಷ್ಟು ಬೆಳೆಯಲು ಬಿಟ್ಟು ಮಣ್ಣಿಗೆ ಸೇರಿಸಿ ಸಾವಯವ ಗೊಬ್ಬರ ತಯಾರಿಸುತ್ತಾರೆ.

ಎರೆ ಗೊಬ್ಬರ ತಯಾರಿಕೆಯಲ್ಲೂ ಪರಿಣತಿ ಪಡೆದಿದ್ದಾರೆ. ತಮ್ಮ ಅನುಭವವನ್ನು ಇತರ ರೈತರೊಂದಿಗೆ ಹಂಚಿಕೊಂಡು ಕೃಷಿಯ ಮೇಲೆ ಹೂಡುವ ಬಂಡವಾಳ ಕಡಿಮೆ ಮಾಡುತ್ತಿದ್ದಾರೆ. ಸಹಜ ಸಾವಯವ ಕೃಷಿಯಿಂದ ಭೂಮಿಯ ಆರೋಗ್ಯ ಕಾಪಾಡುತ್ತಿದ್ದಾರೆ. ಅವರ ಕೃಷಿ ಇತರರಿಗೆ ಮಾದರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.