ADVERTISEMENT

ಸಿಗದ ಸಾಲ: ಆತಂಕದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 8:15 IST
Last Updated 17 ಜೂನ್ 2011, 8:15 IST

ಬಂಗಾರಪೇಟೆ: ರಾಜ್ಯದ ರೈತರಿಗೆ ಏಪ್ರಿಲ್ 1ರಿಂದ  ಶೇ.1ರ ಬಡ್ಡಿದರದಂತೆ ಕೃಷಿ ಸಾಲ ನೀಡುವುದಾಗಿ ಸರ್ಕಾರ ಘೋಷಿಸಿ ಮೂರು ತಿಂಗಳು ಪೂರ್ಣ ಗೊಳ್ಳುತ್ತಿದ್ದರೂ;  ಸಾಲ ನೀಡುವ ಯಾವುದೇ ಚಟುವಟಿಕೆ ಆರಂಭವಾಗಿಲ್ಲ. ಯೋಜನೆ ಅನುಷ್ಠಾನದ ಬಗ್ಗೆ ರೈತರಲ್ಲಿ ಆತಂಕದ ಛಾಯೆ ಮೂಡಿದೆ.

ಸಹಕಾರ ಸಂಘಗಳ ಮೂಲಕ ರಾಜ್ಯದ ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವುದಾಗಿ ರಾಜ್ಯ ಸರ್ಕಾರ 2011-12ನೇ ಬಜೆಟ್‌ನಲ್ಲಿ ಘೋಷಿ ಸಿತ್ತು. ಘೋಷಣೆಯಾಗಿ 3 ತಿಂಗಳಾದರೂ ಈವರೆಗೂ ಯಾವುದೇ ಚಟುವಟಿಕೆ ಆರಂಭ ವಾಗದಿರುವುದು ತಾಲ್ಲೂಕು ರೈತರಿಗೆ ನಿರಾಸೆ ತಂದಿದೆ.
ಉಳಿದ 9 ತಿಂಗಳಲ್ಲಿ ಇನ್ನಷ್ಟು ತಿಂಗಳು ಸರ್ಕಾರ ಕೃಷಿ ಸಾಲ ರೂಪುರೇಷೆಯಲ್ಲಿಯೇ ಕಳೆಯುವುದು.

ಸರ್ಕಾರ ಸಾಲ ನೀಡಬೇಕು ಎಂಬ ಒತ್ತಾಯಕ್ಕೆ ಬಿದ್ದು ತಿಳಿದಾಗ ಸಾಲ ನೀಡುವುದರಿಂದ ಕೃಷಿಗೆ ಯಾವುದೇ ರೀತಿ ಉಪಯೋಗವೇ ಇಲ್ಲ. ಕೃಷಿ ಸಾಲ ವಾಣಿಜ್ಯ ಉಪಯೋಗಕ್ಕೆ ಬಳಕೆಯಾಗುವುದು ಎಂಬ ಆರೋಪವೂ ಕೇಳಿ ಬರುತ್ತಿದೆ.

ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ವಾಡಿಕೆಗಿಂತಲೂ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ರೈತರಲ್ಲಿ ಉತ್ತಮ ಫಸಲು ಕೈಗೆಟುಕುವ ಆಸೆ ಮೂಡಿಸಿತ್ತು. ಹೀಗಾಗಿ ಅವರು ಕೃಷಿಗೆ ಭೂಮಿ ಹದಗೊಳಿಸಿ ಸಿದ್ಧ ರಾಗಿದ್ದರು. ಕೃಷಿ ಸಾಲದ ನೆರವಿನಿಂದ ಉತ್ತಮ ತಳಿ ಬಿತ್ತನೆ ಬೀಜ ಕೊಂಡು ಬಿತ್ತನೆ ಮಾಡುವ ಕನಸು ಅವರದ್ದಾಗಿತ್ತು.

ಸರ್ಕಾರ  ರೈತರ ನೆರವಿಗೆ ಬಾರದ ಕಾರಣ ಎಂದಿನಂತೆ ಸ್ಥಳೀಯ ಲೇವಾದೇವಿಗಾರರಿಗೆ ದುಂಬಾಲು ಬಿದ್ದು ಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆದು ಕೃಷಿ ಚಟುವಟಿಕೆ ಶುರು ಮಾಡ್ದ್ದಿದಾರೆ. ಕೃಷಿ ಸಾಲದ ನಿರೀಕ್ಷೆಯಲ್ಲಿದ್ದ ಕೆಲವು ರೈತರು ಹಣಕಾಸು ಹೊಂದದೇ ಬಿತ್ತನೆ ಮಾಡಲೇ ಇಲ್ಲ. 

 `ಲೆಕ್ಕಪತ್ರ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಅನುಮೋದನೆ ಸಿಕ್ಕ ನಂತರ ಬಜೆಟ್‌ನಲ್ಲಿ ಕೃಷಿ ಸಾಲ ಘೋಷಿಸಬೇಕು. ಪ್ರತಿಯೊಂದನ್ನೂ ಪುಕ್ಕಟೆ ಪ್ರಚಾರಕ್ಕಾಗಿ ಗಿಮಿಕ್ ಮಾಡುವುದನ್ನು ಮುಖ್ಯಮಂತ್ರಿ ಅವರು ಇನ್ನಾದರೂ ನಿಲ್ಲಿಸಲಿ~ ಎನ್ನುತ್ತಾರೆ ತಾಲ್ಲೂಕಿನ ಸಕ್ಕನಹಳ್ಳಿಯ ರೈತ ವೆಂಕಟೇಶ್.

ಆಡಳಿತ ಪಕ್ಷದ ಕಾರ್ಯಕರ್ತರೆ ಅಧಿಕಾರಿಗಳ ಬಳಿ ವಶೀಲಿ ನಡೆಸಿ ಕೃಷಿ ಸಾಲ ಪಡೆದುಕೊಳ್ಳುವ ಅವಕಾಶ ಹೆಚ್ಚಿದೆ. ಬಡ ರೈತರಿಗೆ ಯೋಜನೆ ಫಲ ತಪ್ಪುವ ಅವಕಾಶ ಹೆಚ್ಚಾಗಿದೆ ಎನ್ನುವುದು ಕಾಂಗ್ರೆಸ್ ಮುಖಂಡ ಕೆ.ಎಂ.ನಾರಾಯಣಸ್ವಾಮಿ ಅವರ ಆರೋಪ.

ಸರ್ಕಾರ ಶೇ.1ರ ಬಡ್ಡಿದರದ ಕೃಷಿ ಸಾಲ ಶ್ರೀಮಂತ ರೈತರ ಪಾಲಾಗಲಿದೆ. ಸಾಲದ ಅವಶ್ಯಕತೆ ಇಲ್ಲದವರೂ ಶೇ.1ರ ಬಡ್ಡಿದರ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಕೃಷಿ ಚಟುವಟಿಕೆ ನಡೆಸಲು ಸಾಲ ಪಡೆಯುವರಿಗೆ ಯೋಜನೆ ತಲುಪಲಿ ಎನ್ನುತ್ತಾರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ವೇಮಗಲ್ ಕೃಷ್ಣಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.