ADVERTISEMENT

ಹದಿಹರೆಯ: ಎಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 9:26 IST
Last Updated 9 ಡಿಸೆಂಬರ್ 2013, 9:26 IST

ಕೋಲಾರ: ಹದಿಹರೆಯ ಹಲ ಆಸೆ ಆಕಾಂಕ್ಷೆಗಳನ್ನು ಮೂಡಿಸುವ ಕಾಲ­ಘಟ್ಟ. ಈ ಘಟ್ಟದಲ್ಲಿ ಯುವತಿಯರು ಎಚ್ಚರಿಕೆಯಿಂದ ಇರಬೇಕು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಡಿ.ಎಂ.ರತ್ನಮ್ಮ ಕಿವಿಮಾತು ಹೇಳಿದರು.

ನಗರದ ಮಹಿಳಾ ಜಾಗೃತಿ ವೇದಿಕೆಯು ಮೈರಾಡ ಸಂಸ್ಥೆ ಸಹಯೋಗ­ದಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಬಲ ಯೋಜನೆಯಡಿ ತಾಲ್ಲೂಕಿನ ಛತ್ರಕೋಡಿಹಳ್ಳಿಯ ಸಖಿ, ಸಹೇಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಆಗುವ ದೈಹಿಕ-–ಮಾನಸಿಕ ಬದಲಾವಣೆಗಳ ಬಗ್ಗೆ ಅರಿವನ್ನು ಹೊಂದಿ ಜಾಗೃತರಾಗ­ಬೇಕು. ಅದರೊಂದಿಗೆ ಸಾಮಾಜಿಕ ಅರಿವು, ಆರ್ಥಿಕ ಸ್ವಾವಲಂಬನೆ ಕಡೆಗೂ ಗಮನ ಹರಿಸಬೇಕು ಎಂದರು.

ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ, ವೃತ್ತಿ ಕೌಶಲಗಳು, ಭ್ರೂಣ ಹತ್ಯೆ, ಬಾಲ್ಯ ವಿವಾಹ, ಅತ್ಯಾಚಾರ, ಮಹಿಳೆ ಮಕ್ಕಳ ಸಾಗಣೆ, ಮಾರಾಟದ ಬಗ್ಗೆಯೂ ಕಿಶೋರಿಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ 15 ರಿಂದ 20 ಮಂದಿ ಕಿಶೋರಿಯರ ಸಮೂಹ ರೂಪಿಸಲಾಗಿದೆ.

ಆ ಸಮೂಹಗಳಲ್ಲಿ ಶಾಲೆ ಬಿಟ್ಟ ಒಬ್ಬರನ್ನು ಸಖಿ, ಇಬ್ಬರು ಸಹೇಲಿ­ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯ ಮಮತಾರೆಡ್ಡಿ ಕಾರ್ಯಾಗಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮೈರಾಡ ಸಂಸ್ಥೆಯ ಶೋಭಾ, ಚಂದ್ರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.