ADVERTISEMENT

‘ಬೆಳೆ ಸಮೀಕ್ಷೆಯಲ್ಲಿ ಸಮನ್ವಯ ಕೊರತೆ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:03 IST
Last Updated 17 ಡಿಸೆಂಬರ್ 2013, 6:03 IST

ಮುಳಬಾಗಲು: ಕೃಷಿ ಸಮೀಕ್ಷೆ ದೇಶದ ಎಲ್ಲ ಯೋಜನೆಗಳಿಗೂ ಅತ್ಯಗತ್ಯ­ವಾಗಿದೆ. ಆದರೆ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆಗಳು ಬೆಳೆ ಅಂದಾಜು ಬಗ್ಗೆ ವಿಭಿನ್ನ ವರದಿ ನೀಡುತ್ತಿವೆ ಎಂದು ಜಿಲ್ಲಾ ಸಂಖ್ಯಾಧಿಕಾರಿ ವಿ.ಶಂಕರ­ನಾರಾ­ಯಣ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಸಮಿತಿ ಕಚೇರಿಯಲ್ಲಿ ಸೋಮವಾರ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಮತ್ತು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಿದ್ದ ಭೂ ದಾಖಲೆಗಳಲ್ಲಿ ಬೆಳೆ ದಾಖಲಾತಿ ಹಾಗೂ ಬೆಳೆ ಕಟಾವು ಪ್ರಯೋಗ ಕುರಿತು ಮಾತನಾಡಿದರು.

ನಿಖರವಾದ ಬೆಳೆ ದಾಖಲೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದು­ಕೊಂಡಿದೆ. ಮುಂಗಾರು, ಹಿಂಗಾರು ಮತ್ತು ಬೇಸಿಗೆ ಋತುಮಾನಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ನಿಖರ­ವಾಗಿ ಬೆಳೆಗಳನ್ನು ದಾಖಲು ಮಾಡದಿದ್ದಲ್ಲಿ ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಕಷ್ಟವಾಗುತ್ತದೆ ಎಂಬುದನ್ನು ಸಿಬ್ಬಂದಿ ಅರಿಯಬೇಕು ಎಂದರು.  

ಆದಾಯ, ಬೆಳೆ ವಿಮೆ, ಕೃಷಿ ಬೆಳೆಯಲ್ಲಿ ಏರುಪೇರುನೊಂದಿಗೆ ಸರ್ಕಾರ ನೀತಿ ನಿರೂಪಣೆಗೂ ಬೆಳೆ ದಾಖಲು ಅಗತ್ಯವಿದೆ. ಬೆಳೆ ಕಾಟವು ಪ್ರಯೋಗದಲ್ಲಿ ಉಪಯೋಗಿಸುವ ಅನಿಯಮಿತ ಸಂಖ್ಯೆ ಮೂಲಕ ಮಾಡುವ ಪ್ರಯೋಗ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ. ಪ್ರಪಂಚದ ಯಾವುದೇ ಭಾಗದಲ್ಲೂ ಇದರ ಆಧಾರದ ಮೇಲೆಯೇ ಬೆಳೆ ಕಟಾವು ಮತ್ತು ಅಂದಾಜು ನಡೆಸಲಾಗುವುದು ಎಂದರು.

ಸಭೆ ನಂತರ ಮೇಲ್ಕಂಡ ಇಲಾಖೆ  ಅಧಿಕಾರಿಗಳು ಮತ್ತು ಸಿಬ್ಬಂದಿ ತಾಲ್ಲೂಕಿನ ದೊಡ್ಡಗುರ್ಕಿ ಗ್ರಾಮದ ರಾಗಿ ಹೊಲವೊಂದಕ್ಕೆ ಭೇಟಿ ನೀಡಿತು.

ಬೆಂಗಳೂರು ಅರ್ಥಿಕ ಮತ್ತು ಸಾಂಖ್ಯಿಕ ಉಪನಿರ್ದೇಶಕ ಇಲಿಯಾಸ್ ಪಾಷಾ, ತಹಶೀಲ್ದಾರ್‌ ಡಿ.ವಿ.ರಾಮ­ಮೂರ್ತಿ, ತೋಟಗಾರಿಕೆ ಇಲಾಖೆ ಶಿವಪ್ರಸಾದ್, ಜಿಲ್ಲಾ ಸಹಾಯಕ ಸಂಖ್ಯಾಧಿಕಾರಿಗಳಾದ ಎಸ್‌.ಪ್ರಸಾದ್, ಎನ್.ವೆಂಕಟರವಣಪ್ಪ, ಉಪತಹಶೀಲ್ದಾರ್‌ರಾದ ಆನಂದ್, ವೆಂಕಟೇಶಯ್ಯ, ಸಿ.ಸುಬ್ರಮಣಿ ಮುಂತಾ­ದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.