ADVERTISEMENT

ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ರಾತ್ರೋರಾತ್ರಿ 2 ಅಂಗಡಿ ಪ್ರತ್ಯಕ್ಷ!

ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಅವಾಂತರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:41 IST
Last Updated 7 ಫೆಬ್ರುವರಿ 2023, 2:41 IST
ಕೆಜಿಎಫ್‌ ತಾಲ್ಲೂಕು ಕಚೇರಿ ಆವರಣದಲ್ಲಿ ಇಡಲಾಗಿರುವ ಪೆಟ್ಟಿಗೆ ಅಂಗಡಿಗಳು
ಕೆಜಿಎಫ್‌ ತಾಲ್ಲೂಕು ಕಚೇರಿ ಆವರಣದಲ್ಲಿ ಇಡಲಾಗಿರುವ ಪೆಟ್ಟಿಗೆ ಅಂಗಡಿಗಳು   

ಕೆಜಿಎಫ್: ರಾಬರ್ಟಸನ್ ಪೇಟೆಯ ತಾಲ್ಲೂಕು ಆಡಳಿತ ಸೌಧದ ಆವರಣದೊಳಗೆ ರಾತ್ರೋರಾತ್ರಿ ಎರಡು ಪೆಟ್ಟಿಗೆ ಅಂಗಡಿಗಳನ್ನು ಇಡಲಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಆಡಳಿತ ಸೌಧದಲ್ಲಿ ಈ ಮೊದಲು ನಂದಿನಿ ಪಾರ್ಲರ್ ಅಂಗಡಿ ಇಟ್ಟ ಸಂದರ್ಭದಲ್ಲಿ ವಾರ್ಡ್ ಸದಸ್ಯ ಕೋದಂಡನ್ ಆಕ್ಷೇಪ ವ್ಯಕ್ತಪಡಿ ಸಿದ್ದರು. ನಿಯಮ ಮೀರಿ ಅಂಗಡಿ ತೆರೆಯ ಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದರು. ಅದನ್ನು ರಾಜಕೀಯವಾಗಿ ಪರಿಗಣಿಸಿದ ಬಿಜೆಪಿ ಮುಖಂಡರು ಸ್ಥಳದಲ್ಲಿಯೇ ಕಾವಲಿದ್ದು, ನಗರಸಭೆಯ ನಾಮ ನಿರ್ದೇಶನ ಸದಸ್ಯರ ಕುಟುಂಬಕ್ಕೆ ಅಂಗಡಿಯನ್ನು ಕಟ್ಟಿಕೊಟ್ಟರು.

ಈ ಘಟನೆ ಹಿನ್ನೆಲೆಯಲ್ಲಿಯೇ ಭಾನುವಾರ ರಾತ್ರಿ ಎರಡು ಅಂಗಡಿ ಗಳನ್ನು ಆವರಣದೊಳಗೆ ಇಡಲಾಗಿದೆ. ಒಂದು ಹೋಟೆಲ್ ಮಾದರಿಯಲ್ಲಿದ್ದು, ಮತ್ತೊಂದು ಸಾಮಾನ್ಯ ಸೇವಾ ಕೇಂದ್ರವಾಗಿದೆ.

ADVERTISEMENT

ಸಾಮಾನ್ಯ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಸರ್ಕಾರದ ವಿವಿಧ ಸೇವೆ ಪಡೆಯಲು ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಅನುಮತಿ ನೀಡಲಾಗುತ್ತದೆ. ಇಂತಹ ಕೇಂದ್ರವನ್ನು ತಾಲ್ಲೂಕು ಕಚೇರಿಯಲ್ಲಿ ರಾತ್ರೋರಾತ್ರಿ ಗೇಟ್ ಬೀಗ ತೆಗೆದು ಹೇಗೆ ಇಟ್ಟರು ಎಂಬುದು ಕುತೂಹಲ ಮೂಡಿಸಿದೆ.

ತಾಲ್ಲೂಕು ಆಡಳಿತ ಸೌಧದ ಸುತ್ತಮುತ್ತ ಜನ ಸಂಚಾರಕ್ಕೆ ಅನನುಕೂಲವಾಗುವಂತೆ ಯಾವುದೇ ಅಂಗಡಿಗಳನ್ನು ಇಡಬಾರದು ಎಂದು ಶಾಸಕಿ ಎಂ. ರೂಪಕಲಾ ಸೌಧದ ಉದ್ಘಾಟನಾ ಸಮಾರಂಭದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಒಂದಾದ ಮೇಲೆ ಮತ್ತೊಂದು ಅಂಗಡಿಗಳು ಮುಖ್ಯದ್ವಾರದ ಬಳಿಯೇ ಸ್ಥಾಪಿತವಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಅನಧಿಕೃತ ವ್ಯಕ್ತಿಗಳು ಅನುಮತಿಯಿಲ್ಲದೆ ವಿದ್ಯುತ್ ಸಂಪರ್ಕ ಪಡೆದಿರುವುದು ಕೂಡ ವಿದಾದಕ್ಕೀಡು ಮಾಡಿದೆ.

ಸಾಮಾನ್ಯ ಸೇವಾ ಕೇಂದ್ರಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ಯಾರೂ ಬೇಕಾದರೂ ಆಧಾರ್ ಕಾರ್ಡ್ ನಕಲು ನೀಡಿ ವಿದ್ಯುತ್ ಸೌಲಭ್ಯ ಪಡೆಯಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಸರ್ಕಾರದ ಅಧಿಕಾರಿಗಳೇ ಅನುಮತಿ ಪಡೆಯಬೇಕು ಎಂಬ ಕಡ್ಡಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯ ಸೇವಾ ಕೇಂದ್ರದ ಸ್ಥಾಪನೆಗೆ ಅರ್ಜಿಯನ್ನು ಸಹ ಹಿಂದೆ ನೀಡಿರಲಿಲ್ಲ. ಅರ್ಜಿ ನೀಡಿದ ವಿಷಯವನ್ನು ಟಪಾಲು ಪುಸ್ತಕದಲ್ಲಿ ನಮೂದಿಸಲಾಗಿದೆ. ಆದರೆ, ದಿನಾಂಕ ನಮೂದಿಸಿಲ್ಲ. ಈ ಹಿಂದೆ ಯಾವ ಅಧಿಕಾರಿ ಇಲ್ಲವೇ ಸಿಬ್ಬಂದಿಯ ಕೈವಾಡ ಇದೆ ಎಂಬುದು ತಿಳಿದಿಲ್ಲ ಎಂದು ತಾಲ್ಲೂಕು ಕಚೇರಿಯ ಮೂಲಗಳು ತಿಳಿಸಿವೆ.

‘ಅಂಗಡಿಗಳು ಹೇಗೆ ಬಂದವು ಎಂಬುದನ್ನು ಪರಿಶೀಲಿಸಲಾಗುವುದು. ಅವುಗಳನ್ನು ತೆರವು ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ’ ಎಂದು ತಹಶೀಲ್ದಾರ್‌ ಕೆ.ಎನ್. ಸುಜಾತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.