ಎಚ್ಐವಿ
ಕೋಲಾರ: ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ 278 ಜನರಲ್ಲಿ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಅಲ್ಲದೇ, 9 ಮಂದಿ ಗರ್ಭಿಣಿಯರು ಹಾಗೂ 18 ತಿಂಗಳೊಳಗಿನ ಒಂದು ಮಗುವಿನಲ್ಲೂ ಸೋಂಕು ಇರುವುದು ಕಂಡುಬಂದಿದೆ.
ಸಾಮಾನ್ಯ ಪ್ರಕರಣಗಳಲ್ಲಿ ಈ ವರೆಗೆ 75,494 ಮಂದಿಗೆ ಎಚ್‌ಐವಿ ಪರೀಕ್ಷೆ ಮಾಡಿದ್ದು, ಪಾಸಿಟಿವಿಟಿ ರೇಟ್ ಶೇ 0.37 ಇದೆ. 145 ಪುರುಷರು, 129 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗಿ ಸೋಂಕಿತರಿದ್ದಾರೆ.
16,382 ಗರ್ಭಿಣಿಯರನ್ನು ಪರೀಕ್ಷಿಸಿದ್ದು, 9 ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಇದರ ಪಾಸಿಟಿವಿಟಿ ರೇಟ್ ಶೇ 0.05 ರಷ್ಟಿದೆ. 18 ತಿಂಗಳ ಅವಧಿಯ 23 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಂದು ಮಗುವಿನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಕೋಲಾರ ತಾಲ್ಲೂಕಿನಲ್ಲೇ ಅತ್ಯಂತ ಹೆಚ್ಚು ಎಚ್‌ಐವಿ ಸೋಂಕಿತರಿದ್ದಾರೆ. ಆರು ಗರ್ಭಿಣಿಯರು ಸೇರಿದಂತೆ 180 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಕೇವಲ 16 ಪಾಸಿಟಿವ್ ಪ್ರಕರಣ ದಾಖಲಾಗಿವೆ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗಿರುವುದು ಅಂಕಿಅಂಶಗಳಿಂದ ಗೊತ್ತಾಗುತ್ತದೆ. ಏಕೆಂದರೆ 2009–10ರಲ್ಲಿ ಸೋಂಕಿನ ಪ್ರಮಾಣ ಶೇ 3.47ರಷ್ಟಿತ್ತು. 2024–25ನೇ ಸಾಲಿನಲ್ಲಿ ಅಕ್ಟೋಬರ್ ಅಂತ್ಯದವರೆಗೆ ಶೇ 0.37ರಷ್ಟಿದೆ.
ಎಚ್‍ಐವಿ ಸೋಂಕು, ತಾಯಿಯಿಂದ ಮಗುವಿಗೆ ಬರದಂತೆ ತಡೆಯಲು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾದ ತಕ್ಷಣವೇ ಎಆರ್‌ಟಿ ಚಿಕಿತ್ಸೆ ನೀಡಬೇಕು. ಹೆರಿಗೆ ನಂತರ ಮಗುವಿಗೆ 6 ವಾರ ಅಥವಾ 12 ವಾರ ನೆವರೆಪಿನ್ ದ್ರಾವಣ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಬರುವ ಎಚ್‍ಐವಿ ಸೋಂಕನ್ನು ನಿಯಂತ್ರಿಸಲಾಗುವುದು. ಈ ಸೌಲಭ್ಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ ಎಂಬುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆ-2, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು, ಸಾರ್ವಜನಿಕ ಆಸ್ಪತ್ರೆ ಶ್ರೀನಿವಾಸಪುರ, ಸಾರ್ವಜನಿಕ ಆಸ್ಪತ್ರೆ ಬಂಗಾರಪೇಟೆ, ಸಾರ್ವಜನಿಕ ಆಸ್ಪತ್ರೆ ಮಾಲೂರು, ಸಾರ್ವಜನಿಕ ಆಸ್ಪತ್ರೆ ಕೆ.ಜಿ.ಎಫ್, ಬೆಮಲ್ ಮೆಡಿಕಲ್ ಸೆಂಟರ್‌ನಲ್ಲಿ ಐ.ಸಿ.ಟಿ.ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಸಾಮಾನ್ಯ ಪ್ರಕರಣಗಳಿಗೆ ಹಾಗೂ ಎಲ್ಲಾ ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ ನೀಡುತ್ತಾರೆ. ಎಚ್‍ಐವಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.
ಎಚ್‌ಐವಿ ಸೋಂಕಿತರಿಗೆ ಸೌಲಭ್ಯ: ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಅಭಿವೃದ್ಧಿ ನಿಗಮದಿಂದ ಧನಶ್ರೀ ಯೋಜನೆ ಅಡಿಯಲ್ಲಿ 2023–24ನೇ ಸಾಲಿನಲ್ಲಿ 138 ಎಚ್‌ಐವಿ ಸೋಂಕಿತ ಮಹಿಳೆಯರಿಗೆ ತಲಾ ₹ 30 ಸಾವಿರ ಸಹಾಯಧನ ನೀಡಲಾಗಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ 22 ಎಚ್‌ಐವಿ ಸೋಂಕಿತರು ಹಾಗೂ 27 ಲೈಂಗಿಕ ಕಾರ್ಯಕರ್ತೆಯರು ಸಹಾಯಧನ–ಸಾಲ ಸೌಲಭ್ಯ ಪಡೆದಿದ್ದಾರೆ.
96 ಎಚ್‌ಐವಿ ಸೋಂಕಿತರಿಗೆ ಅನ್ನ ಅಂತ್ಯೋದಯ ಯೋಜನೆ ಅಡಿಯಲ್ಲಿ ರೇಷನ್ ಸೌಲಭ್ಯ ಒದಗಿಸಲಾಗಿದೆ. ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂ ಬಾಧಿತ 324 ಮಕ್ಕಳಿಗೆ ತಿಂಗಳಿಗೆ ₹ 1 ಸಾವಿರ ನೀಡಲಾಗುತ್ತಿದೆ. 6 ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.