ADVERTISEMENT

ಕೋಲಾರ: 4ರಿಂದ ಶ್ರೀಕೃಷ್ಣದೇವರಾಯ ವರ್ಧಂತಿ

ಅಭಿವೃದ್ಧಿ ಪ್ರಾಧಿಕಾರ, ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 4:03 IST
Last Updated 23 ಫೆಬ್ರುವರಿ 2023, 4:03 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾಮ್ರಾಟ್ ಶ್ರೀಕೃಷ್ಣದೇವರಾಯ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್ ಮಾತನಾಡಿದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಾಮ್ರಾಟ್ ಶ್ರೀಕೃಷ್ಣದೇವರಾಯ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ.ಸುರೇಶ್‍ಕುಮಾರ್ ಮಾತನಾಡಿದರು   

ಕೋಲಾರ: ‘ಶ್ರೀಕೃಷ್ಣದೇವರಾಯರ 552ನೇ ವರ್ಧಂತಿಯನ್ನು ಮಾರ್ಚ್‌ 4 ಹಾಗೂ 5ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಾಮ್ರಾಟ್ ಶ್ರೀಕೃಷ್ಣದೇವರಾಯ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಕೆ.ವಿ. ಸುರೇಶ್‍ಕುಮಾರ್ ತಿಳಿಸಿದರು.

‘4ರಂದು ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ, ಇತಿಹಾಸ ಪ್ರಾಚ್ಯ ಸಂಶೋಧಕರಿಂದ ಉಪನ್ಯಾಸ ನಡೆಯಲಿದೆ. 5ರಂದು ನೃತ್ಯರೂಪಕ, ಅಂತರರಾಷ್ಟ್ರೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜನಪದ ಆತಿಥ್ಯದೊಂದಿಗೆ ಕುಸ್ತಿ ಪ್ರದರ್ಶನ ಸ್ಪರ್ಧೆಯಂತಹ ಪಾರಂಪರಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘1471ರಲ್ಲಿ ವಿಜಯನಗರದಲ್ಲಿ ಶ್ರೀಕೃಷ್ಣ ದೇವರಾಯರು ಜನಿಸಿದರು. 1509ರಲ್ಲಿ ಪಟ್ಟಾಭಿಷೇಕ ನಡೆಯಿತು. 1520ರ ವರೆಗೆ ಅತ್ಯುತ್ತಮವಾಗಿ ಆಡಳಿತ ನಡೆಸಿದ್ದು, ದೇಶ, ವಿದೇಶಗಳಿಂದ ಹೊಗಳಿಕೆ ವ್ಯಕ್ತವಾಗಿದೆ’ ಎಂದರು.

ADVERTISEMENT

‘ಮುಳಬಾಗಿಲನ್ನು ರಾಜಧಾನಿಯಾಗಿಸಿಕೊಂಡು ಕೋಲಾರ ಜಿಲ್ಲೆಯಲ್ಲಿಯೂ ಆಡಳಿತ ನಡೆಸಿದ್ದು, ಆಗ ನಿರ್ಮಾಣಗೊಂಡಿರುವ ಕೋಟೆ ಕೊತ್ತಲಗಳು, ದೇವಾಲಯಗಳು, ಕಲಾಪೋಷಣೆಗಳು, ಶಿಲಾ ಶಾಸನಗಳು ಲಭ್ಯವಾಗಿವೆ. ಸಾಕಷ್ಟು ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದರೂ ಅವರ ಕುರಿತಾಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡದಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಳಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಕೃಷ್ಣದೇವರಾಯರ ಶಿಲಾ ಪ್ರತಿಮೆ ಸ್ಥಾಪಿಸಬೇಕು. ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು, ಅಧ್ಯಯನ ಪೀಠವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಆರಂಭಿಸಬೇಕು. ಕೋಟೆಕೊತ್ತಲಗಳನ್ನು ಬಗ್ಗೆ ಪ್ರವಾಸಿ ತಾಣವನ್ನಾಗಿಸಬೇಕೆನ್ನುವ ಬೇಡಿಕೆಗಳನ್ನು ವರ್ಧಂತಿಯಲ್ಲಿ ವ್ಯಕ್ತಪಡಿಸಲಾಗುವುದು. ಜತೆಗೆ, ಚುನಾವಣೆಯ ನಂತರ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜನೆ ಮಾಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಶ್ರೀಯೋಗಿನಾರೇಯಣ ಬಲಿಜ ನೌಕರರ ಸಂಘದ ಅಧ್ಯಕ್ಷ ಪ್ರಸಾದ್ ಮಾತನಾಡಿ, ‘ಬಹಳಷ್ಟು ವರ್ಷಗಳ ಹೋರಾಟದ ಫಲವಾಗಿ ಕೈವಾರ ತಾತಯ್ಯರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಲಾಗುತ್ತಿದೆ. ಮುಂದೆಯೂ ಶ್ರೀಕೃಷ್ಣದೇವರಾಯರ ಜಯಂತಿಯನ್ನು ಆಚರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ವಕೀಲ ಕೆ.ವಿ. ಶ್ರೀನಿವಾಸ್, ಎಸ್.ಎಸ್. ಶ್ರೀಧರ್, ಸೊಣ್ಣೇಪಲ್ಲಿ ಸುರೇಶ್, ರಂಗನಾಥ್, ವೇಮಗಲ್ ವೆಂಕಟೇಶ್, ಸೀತಿಪುರ ರಾಜೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.