ADVERTISEMENT

ಕೋಲಾರ: ಪಡಿತರ ಚೀಟಿಗಾಗಿ ಕಾಯುತ್ತಿರುವ 4,654 ಅರ್ಜಿದಾರರು

ಕೆ.ಓಂಕಾರ ಮೂರ್ತಿ
Published 18 ಫೆಬ್ರುವರಿ 2024, 5:45 IST
Last Updated 18 ಫೆಬ್ರುವರಿ 2024, 5:45 IST
ಪಡಿತರ ಚೀಟಿಗಳು
ಪಡಿತರ ಚೀಟಿಗಳು   

ಕೋಲಾರ: ಜಿಲ್ಲೆಯಲ್ಲಿ ಎಎವೈ, ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷಗಳಿಂದ ಕಾಯುತ್ತಿರುವ 4 ಸಾವಿರಕ್ಕೂ ಅಧಿಕ ಅರ್ಜಿದಾರರಲ್ಲಿ ಈಗ ಆಶಾಭಾವ ಮೂಡಿದೆ.

ಮಾರ್ಚ್‌ 31ರೊಳಗೆ ಹಳೆ ಅರ್ಜಿಗಳನ್ನು ವಿಲೇವಾರಿ ಮಾಡಿ, ಏಪ್ರಿಲ್ 1ರಿಂದ ಹೊಸದಾಗಿ ಅರ್ಜಿ ಹಾಕಲು ಅವಕಾಶ ಮಾಡಿಕೊಡುವುದಾಗಿ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ‌, ಅಧಿವೇಶನದಲ್ಲಿ ಭರವಸೆ ನೀಡಿದ್ದಾರೆ. ರದ್ದುಗೊಂಡಿರುವ ಪಡಿತರ ಚೀಟಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಮರು ಮಂಜುರಾತಿ ಮಾಡಲಾಗುವುದು ಎಂದೂ ಹೇಳಿದ್ದಾರೆ.

ಕುಟುಂಬದ ಯಜಮಾನಿಗೆ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳು ₹ 2 ಸಾವಿರ ‌ಲಭಿಸುತ್ತಿದ್ದು, ಹೊಸದಾಗಿ ಕಾರ್ಡ್‌ ಪಡೆಯಲು ಬೇಡಿಕೆ ಹೆಚ್ಚುತ್ತಿದೆ. ಇದಲ್ಲದೇ, ಬಿಪಿಎಲ್‌ ಕಾರ್ಡ್‌ ಹೊಂದಿರುವ ಪ್ರತಿ ಸದಸ್ಯರಿಗೆ ತಿಂಗಳಿಗೆ ₹ 170 ಸಿಗುತ್ತಿದೆ. ಆದರೆ, ಆಹಾರ ಇಲಾಖೆಯು ತುರ್ತು ಪ್ರಕರಣ ಹೊರತಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 15,047 ಮಂದಿ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 878 ಮಂದಿ ಅರ್ಜಿ ವಾಪಸ್‌ ಪಡೆದಿದ್ದಾರೆ. ಆಹಾರ ಇಲಾಖೆಯಿಂದ 12,986 ಮಂದಿ ಅರ್ಜಿದಾರರ ನಿವಾಸಕ್ಕೆ ತೆರಳಿ ಸ್ಥಳ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 5,969 ಅರ್ಜಿಗಳಿಗೆ ಒಪ್ಪಿಗೆ ನೀಡಿ ಇನ್ನುಳಿದ 4,424 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆರು ತಾಲ್ಲೂಕುಗಳಿಂದ ಒಟ್ಟು 4,654 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.

‘2022ರ ಸೆಪ್ಟೆಂಬರ್‌ ನಂತರ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ಪಡಿತರ ಚೀಟಿಗಳ ವಿಲೇವಾರಿ ಆಗಿಲ್ಲ. ಅದಕ್ಕೂ ಮುನ್ನ ಅರ್ಜಿ ಸಲ್ಲಿಸಿದವರಿಗೆ ವಿತರಣೆ ಮಾಡಲಾಗಿದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಲತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಂತ್ಯೋದಯ (ಎಎವೈ) ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳಿಗೆ 21 ಕೆ.ಜಿ ಅಕ್ಕಿ, 14 ಕೆ.ಜಿ ರಾಗಿಯನ್ನು ಉಚಿತವಾಗಿ ನೀಡಲಾಗುತ್ತದೆ. ಬಿ‍ಪಿಎಲ್‌ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಘೋಷಿಸಿದ್ದು, ಈಗ 3 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ ಹಾಗೂ ಐದು ಕೆ.ಜಿಯ ಅಕ್ಕಿ ಮೊತ್ತ ₹ 170 ನೀಡಲಾಗುತ್ತಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಕೆ.ಜಿಗೆ ₹ 15ರಂತೆ 10 ಕೆ.ಜಿ ಅಕ್ಕಿ ಲಭಿಸುತ್ತದೆ.

ವಿವಿಧ ಕಾರಣಗಳಿಂದ ಆರು ತಿಂಗಳಿನಿಂದ ಪಡಿತರ ಪಡೆಯದ ಆರು ಸಾವಿರಕ್ಕೂ ಅಧಿಕ ಕಾರ್ಡ್‌ಗಳನ್ನು ಆಹಾರ ಇಲಾಖೆಯು ಈಗಾಗಲೇ ಪತ್ತೆ ಹಚ್ಚಿದೆ. ಈ ಕಾರ್ಡ್‌ಗೆ ಬದಲಾಗಿ ಹೊಸ ಪಡಿತರ ಚೀಟಿಗಳಿಗೆ ಇಲಾಖೆ ಅನುಮೋದನೆ ನೀಡುವ ಸಾಧ್ಯತೆಯೂ ಇದೆ.

ಕೋಲಾರ ಜಿಲ್ಲೆಯಲ್ಲಿ ವಿಲೇವಾರಿಗೆ ಬಾಕಿ ಇರುವ ಪಡಿತರ ಚೀಟಿಗಳು (ತಾಲ್ಲೂಕು; ಬಾಕಿ)

ಬಂಗಾರಪೇಟೆ; 704

ಕೋಲಾರ; 838

ಮಾಲೂರು; 845

ಮುಳಬಾಗಿಲು; 801

ಶ್ರೀನಿವಾಸಪುರ; 763

ಕೆಜಿಎಫ್‌; 703

ಒಟ್ಟು; 4654

ಇಲಾಖೆಯ ಮುಖ್ಯ ಕಚೇರಿಯಿಂದ ಸೂಚನೆ ಬಂದ ತಕ್ಷಣ ಬಾಕಿ ಇರುವ ಪಡಿತರ ಚೀಟಿ ವಿಲೇವಾರಿಗೆ ಕ್ರಮ ವಹಿಸುತ್ತೇವೆ. ಅರ್ಹ ಫಲಾನುಭವಿಗಳಿಗೆ ಚೀಟಿ ವಿತರಿಸುತ್ತೇವೆ
ಲತಾ, ಉಪನಿರ್ದೇಶಕಿ, ಆಹಾರ ಇಲಾಖೆ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.