ADVERTISEMENT

ಬೆಲೆ ಕುಸಿತ: ರೈತರಿಗೆ ಮುಳ್ಳಾದ ಹೂವು

ಆರ್.ಚೌಡರೆಡ್ಡಿ
Published 5 ಫೆಬ್ರುವರಿ 2018, 9:03 IST
Last Updated 5 ಫೆಬ್ರುವರಿ 2018, 9:03 IST
ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದ ಸಮೀಪ ತೋಟದಲ್ಲಿ ಚೆಂಡು ಹೂ ಕೀಳುತ್ತಿರುವ ಕೃಷಿಕರು
ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಗ್ರಾಮದ ಸಮೀಪ ತೋಟದಲ್ಲಿ ಚೆಂಡು ಹೂ ಕೀಳುತ್ತಿರುವ ಕೃಷಿಕರು   

ಶ್ರೀನಿವಾಸಪುರ: ಈಗ ಬೆಲೆ ಕುಸಿತದ ಬಿಸಿ ಚೆಂಡು ಹೂ ಬೆಳೆಗಾರರಿಗೆ ಮುಟ್ಟಿದೆ. ಕಷ್ಟಪಟ್ಟು ಬೆಳೆದಿರುವ ಹೂವು ಬೇಡಿಕೆ ಇಲ್ಲದೆ ತೋಟಗಳಲ್ಲಿ ಕೊಳೆಯುತ್ತಿದೆ. ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಅದರಲ್ಲೂ ಗಡಿ ಭಾಗದಲ್ಲಿ ರೈತರು ಕೊಳವೆ ಬಾವಿಗಳ ಆಶ್ರಯದಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಚೆಂಡು ಹೂ ಬೆಳೆದಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಚೆಂಡು ಹೂವಿನ ಬೆಲೆ ಕೆಜಿಯೊಂದಕ್ಕೆ ₹ 5 ಇದೆ. ಈ ಬೆಲೆಯಲ್ಲಿ ಹೂ ಬಿಡಿಸಿದ ಕೂಲಿಯೂ ಹೊರಡುತ್ತಿಲ್ಲ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ರೈತರು ಹೂವನ್ನು ಬಿಡಿಸದೆ ಬಿಟ್ಟಿದ್ದಾರೆ.

ಗಿಡಗಳ ತುಂಬ ದಟ್ಟವಾಗಿ ಬಂದಿರುವ ಹೂವು ಪೂರ್ಣ ಪ್ರಮಾಣದಲ್ಲಿ ಅರಳಿ ನಗುತ್ತಿದೆ. ಆದರೆ ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಬರದೆ ಬೆಳೆಗಾರರು ಪರಿತಪಿಸುತ್ತಿದ್ದಾರೆ. ಕೆಲವರು ಹೂವನ್ನು ಕಿತ್ತು ತೋಟದ ಪಕ್ಕದಲ್ಲಿ ರಾಶಿ ಹಾಕುತ್ತಿದ್ದಾರೆ. ಹಾಗೆ ಬಿಟ್ಟ ಹೂವು ಜಾನುವಾರು ಹೊಟ್ಟೆ ಸೇರುತ್ತಿದೆ. ಬಿರಿದ ಹೂವು ಕೊಳೆಯುುವುದನ್ನು ನೋಡಲಾಗದೆ ಕಿತ್ತು ಮಾರುಕಟ್ಟೆಗೆ ಸಾಗಿಸಿದವರು ಕೈಸುಟ್ಟುಕೊಳ್ಳುತ್ತಿದ್ದಾರೆ.

ADVERTISEMENT

ಬದಲಾದ ಪರಿಸ್ಥಿತಿಯಲ್ಲಿ ತಾಲ್ಲೂಕಿನ ರೈತರು ಪುಷ್ಪ ಕೃಷಿಗೆ ಮಣೆ ಹಾಕಿದ್ದಾರೆ. ಅಧಿಕ ಬಂಡವಾಳದ ಟೊಮೆಟೊಗೆ ಪರ್ಯಾಯವಾಗಿ ಬೇರೆ ಬೇರೆ ಬಣ್ಣಗಳ ಹೈಬ್ರೀಡ್‌ ಚೆಂಡು ಹೂ ಬೆಳೆದಿದ್ದಾರೆ. ಅಧಿಕ ವಿಸ್ತೀರ್ಣದಲ್ಲಿ ಬೆಳೆದಿರುವುದೇ ಬೆಳೆಗಾರರ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಹೂವಿಗೆ ಬೆಲೆ ಕುಸಿತ ಉಂಟಾಗಿದೆ. ರೈತರು ದಿಕ್ಕುಗಾಣದೆ ಕೈಕಟ್ಟಿ ಕುಳಿತಿದ್ದಾರೆ.

ಚಿಲ್ಲರೆ ಮಾರಾಟಗಾರರು ಕೆಜಿಗೆ ₹ 20 ರಂತೆ ಮಾರಾಟ ಮಾಡುತ್ತಿದ್ದಾರೆ. ಸಂಜೆಯ ವರೆಗೆ ಮಾರಾಟ ಮಾಡುತ್ತಾರೆ. ಮಾರಾಟವಾಗದೆ ಉಳಿದ ಹೂವಿನ ರಾಶಿ ಅಲ್ಲಿಯೇ ಬಿಟ್ಟು ಹೊರಡುತ್ತಾರೆ. ಅದು ದನಗಳಿಗೆ ಆಹಾರವಾಗುತ್ತದೆ.

ಈ ಹಿಂದೆ ಇಂಥ ಹೂವನ್ನು ಬಣ್ಣಗಳ ತಯಾರಿಕೆಗೆ ಖರೀದಿಸುತ್ತಿದ್ದರು. ಆಗ ಬೆಳೆಗಾರರಿಗೆ ಒಳ್ಳೆ ಲಾಭ ಸಿಗುತ್ತಿತ್ತು. ಆದರೆ ಈಗ ಯಾವುದೇ ಕಂಪನಿ ಹೂವಿಗಾಗಿ ಬರುತ್ತಿಲ್ಲ. ಇದೂ ಸಹ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ಹೆಚ್ಚಿರುವ ಆವಕದ ಪ್ರಮಾಣ ಬೆಲೆ ಕುಸಿತಕ್ಕೆ ಕಾರಣ.ಹೂವು ಬೆಳೆದವರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.

* * 

ಈ ಬಾರಿ ಚೆಂಡು ಹೂ ಬೆಳೆದು ಕೈಸುಟ್ಟುಕೊಂಡಿದ್ದೇವೆ. ಹೂವಿನ ಮಾರಾಟದಿಂದ, ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಸಹ ಹೊರಡುತ್ತಿಲ್ಲ
ಚಿನ್ನಪಾಪಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.