ADVERTISEMENT

ಕೋಲಾರ ಜಿಲ್ಲೆಗೆ ಶೇ 75ರಷ್ಟು ಪಠ್ಯ ವಿತರಣೆ

ಮೇ 29ಕ್ಕೆ ಸರ್ಕಾರಿ ಶಾಲಾ ಆರಂಭೋತ್ಸವ ಕಾರ್ಯಕ್ರಮ । ಮಕ್ಕಳ ಸ್ವಾಗತಕ್ಕೆ ಸಿದ್ಧತೆ

ಕೆ.ಓಂಕಾರ ಮೂರ್ತಿ
Published 25 ಮೇ 2025, 6:45 IST
Last Updated 25 ಮೇ 2025, 6:45 IST
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಕೃಷ್ಣಮೂರ್ತಿ ಹಾಗೂ ಅಧಿಕಾರಿಗಳು ಶ್ರೀನಿವಾಸಪುರದಲ್ಲಿ ಶೇಖರಿಸಿಟ್ಟಿರುವ ಶಾಲಾ ಪಠ್ಯ ಪುಸ್ತಕಗಳ ಬಂಡಲ್‌ ವೀಕ್ಷಿಸಿದರು
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಕೃಷ್ಣಮೂರ್ತಿ ಹಾಗೂ ಅಧಿಕಾರಿಗಳು ಶ್ರೀನಿವಾಸಪುರದಲ್ಲಿ ಶೇಖರಿಸಿಟ್ಟಿರುವ ಶಾಲಾ ಪಠ್ಯ ಪುಸ್ತಕಗಳ ಬಂಡಲ್‌ ವೀಕ್ಷಿಸಿದರು   

ಕೋಲಾರ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಆರಂಭೋತ್ಸವಕ್ಕೆ ಕೇವಲ ಐದು ದಿನ ಬಾಕಿ ಇದ್ದು ಶಾಲಾ ಶಿಕ್ಷಣ ಇಲಾಖೆಯಿಂದ ಶೇ 75ರಷ್ಟು ಪಠ್ಯ ಪುಸ್ತಕ ಪೂರೈಕೆಯಾಗಿವೆ. ಇನ್ನುಳಿದ ಪಠ್ಯ ಪುಸ್ತಕ ಬರಬೇಕಿದ್ದು, ಸಮವಸ್ತ್ರ ಇನ್ನಷ್ಟೇ ಪೂರೈಕೆ ಆಗಬೇಕಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಮತ್ತು ಅನುದಾನರಹಿತ ಶಾಲೆಗಳಿಗೆ ನಿಗದಿತ ದರದಲ್ಲಿ ಸರ್ಕಾರ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತದೆ.

ಬೇಸಿಗೆ ರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ಜಿಲ್ಲೆಯ ಶಾಲೆಗಳು ಸಜ್ಜಾಗಿವೆ. ಗುರುವಾರ (ಮೇ 29) ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿದ್ದು, ಅಂದು ಮಕ್ಕಳನ್ನು ಸ್ವಾಗತಿಸುವ ‘ಆರಂಭೋತ್ಸವ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ. ಈ ವರ್ಷವೂ ಶಾಲೆಯ ಆರಂಭದಲ್ಲೇ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಲು ಸಿದ್ಧತೆ ನಡೆಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ 1 ರಿಂದ 7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಟ್ಟು 1,802 ಹಾಗೂ 125 ಸರ್ಕಾರಿ ಪ್ರೌಢಶಾಲೆಗಳಿವೆ. ಉಳಿದಂತೆ ಅನುದಾನಿತ 44 ಪ್ರಾಥಮಿಕ ಹಾಗೂ 59 ಪ್ರೌಢಶಾಲೆಗಳು, ಅನುದಾನರಹಿತ 359 ಪ್ರಾಥಮಿಕ ಹಾಗೂ 203 ಪ್ರೌಢಶಾಲೆಗಳು ಇವೆ. 1,204 ಕಿರಿಯ ಪ್ರಾಥಮಿಕ, 1,035 ಹಿರಿಯ ಪ್ರಾಥಮಿಕ ಹಾಗೂ 420 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 2,659 ಶಾಲೆಗಳು ಜಿಲ್ಲೆಯಲ್ಲಿವೆ. 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. 1ನೇ ತರಗತಿ ಪ್ರವೇಶಕ್ಕೆ ನೋಂದಣಿ ನಡೆಯುತ್ತಿದೆ.

‘ಶಾಲೆಗೆ ಮಕ್ಕಳನ್ನು ಸ್ವಾಗತಿಸುವ ಮೊದಲ ದಿನವೇ ಪುಸ್ತಕ ವಿತರಣೆಗೆ ಶಾಲೆಗಳಲ್ಲಿ ಶಿಕ್ಷಕರು ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಗೋದಾಮಿನಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದು, ಶಾಲೆಗಳಿಗೆ ವಿತರಣೆ ಮಾಡಲಾಗುತ್ತಿದೆ. ಮಿಕ್ಕ ಪುಸ್ತಕಗಳು ಶಾಲೆ ಆರಂಭಕ್ಕೆ ಮುನ್ನ ಬರಲಿವೆ’ ಎಂದು‌ ಡಿಡಿಪಿಐ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಭ್ಯ ಪುಸ್ತಕಗಳನ್ನು ಈಗಾಗಲೇ ತಾಲ್ಲೂಕುವಾರು ಕಳುಹಿಸಲಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪುಸ್ತಕ ವಿತರಣೆ ಜವಾಬ್ದಾರಿ ವಹಿಸಲಾಗಿದೆ’ ಎಂದರು.

6ರಿಂದ 10ನೇ ತರಗತಿ ತನಕ ಮೂರು ಪ್ರಮುಖ ವಿಷಯ, ಮೂರು ಭಾಷಾ ವಿಷಯ ಹಾಗೂ ದೈಹಿಕ ಶಿಕ್ಷಣ ಸೇರಿ ಒಟ್ಟು ಏಳು ವಿಷಯಗಳು ಇರುತ್ತವೆ. ಒಟ್ಟು 14 ಟೈಟಲ್‌ಗಳ ಪುಸ್ತಕಗಳಿರಲಿವೆ. 1ರಿಂದ 5ನೇ ತರಗತಿಗೆ ನಾಲ್ಕು ವಿಷಯಗಳು ಇದ್ದು, ಎಂಟು ಟೈಟಲ್‌ಗಳ ಪುಸ್ತಕಗಳು ಪೂರೈಕೆಯಾಗುತ್ತವೆ.

ಬೇಸಿಗೆಯ ರಜೆ ಮುಗಿದು ಇನ್ನು ಕೆಲವೇ ದಿನಗಳಲ್ಲಿ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲಿದ್ದು, ಎಲ್ಲೆಡೆ ಪುಸ್ತಕ, ಬ್ಯಾಗ್, ಸ್ಟೇಷನರಿ ಸಾಮಗ್ರಿಗಳ ಖರೀದಿ ಭರಾಟೆಯೂ ಜೋರಾಗಿದೆ.

ಪಠ್ಯ ಪುಸ್ತಕಗಳನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತವಾಗಿ ವಿತರಿಸಲಾಗುವುದು. ಶಾಲಾ ಆರಂಭೋತ್ಸವ ದಿನವೇ (ಮೇ 29) ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೃಷ್ಣಮೂರ್ತಿ, ಡಿಡಿಪಿಐ ಕೋಲಾರ

ಮೇ 28ರಂದು ಶಿಕ್ಷಕರು ಸ್ವಚ್ಛತಾ ಕಾರ್ಯಕ್ರಮ ನಡೆಸಲಿದ್ದಾರೆ. ಶಾಲಾ ಆವರಣ, ಕೊಠಡಿ, ಬಿಸಿಯೂಟ ಕೊಠಡಿ, ಅಡುಗೆ ಪಾತ್ರೆ, ದಾಸ್ತಾನು ಕೊಠಡಿ, ನೀರಿನ ಟ್ಯಾಂಕ್‌, ಶೌಚಾಲಯ ಸ್ವಚ್ಛಗೊಳಿಸಲಿದ್ದಾರೆ. ಶಾಲೆಯನ್ನು ಅಲಂಕರಿಸಿ ಮೇ 29ರಂದು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದಾರೆ.

‘ಶಿಕ್ಷಕರು ಮೊದಲ ದಿನ ಹಾಜರಿದ್ದು, ಶಾಲೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಈಗಾಗಲೇ ಬಿಇಒ, ಮುಖ್ಯಶಿಕ್ಷಕರು, ಸಿಆರ್‌ಪಿ, ಬಿಆರ್‌ಪಿ ಸೇರಿದಂತೆ ಸಂಬಂಧಿಸಿದವರ ಜೊತೆಗೆ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಕೃಷ್ಣಮೂರ್ತಿ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ಗೆ ಸಿದ್ಧತೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಮೇ 26ರಿಂದ ಜೂನ್ 2ರ ವರೆಗೆ ನಡೆಯಲಿದೆ. ಅದಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಸಿದ್ಧತೆಗಳು ನಡೆದಿವೆ. ಪರೀಕ್ಷೆ ಬರೆಯಲು 6683 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 20 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆ–1ರಲ್ಲಿ ಜಿಲ್ಲೆಯ ಫಲಿತಾಂಶ ಹಾಗೂ ಸ್ಥಾನ ಕುಸಿದಿದೆ. ಹೀಗಾಗಿ ಪರೀಕ್ಷೆ–2ಗೆ ಮಕ್ಕಳನ್ನು ಸಿದ್ಧಗೊಳಿಸಲಾಗುತ್ತಿದೆ.

ಸೇತುಬಂಧ ಮಿಂಚಿನ ಸಂಚಾರ

‘ಜಿಲ್ಲೆಯಲ್ಲಿ ಜೂನ್‌ 15 ರವರೆಗೆ ಇಲಾಖೆಯ ವಿವಿಧ ಅನುಷ್ಠಾನಾಧಿಕಾರಿಗಳು ಮಿಂಚಿನ ಸಂಚಾರ ನಡೆಸಲಿದ್ದು ಶಾಲೆಗಳಿಗೆ ಭೇಟಿ ನೀಡಿ ಕೈಗೊಂಡ ಸಿದ್ಧತೆಗಳು ಪಠ್ಯ ಸಮವಸ್ತ್ರ ವಿತರಣೆ ಮತ್ತಿತರ ಅಂಶಗಳ ಕುರಿತು ಪರಿಶೀಲನೆ ನಡೆಸುವರು. ಇದರಿಂದ ಸಮಸ್ಯೆ ಪತ್ತೆ ಹಚ್ಚಿ ಬಗೆಹರಿಸಬಹುದು’ ಎಂದು ಡಿಡಿಪಿಐ ಕೃಷ್ಣಮೂರ್ತಿ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮವಹಿಸಲು ಜೂನ್‌ 1ರಿಂದ 15ರವರೆಗೆ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜೂನ್ 1ರಿಂದ 20ವರೆಗೆ ಸೇತುಬಂಧ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಗೋದಾಮಿನಲ್ಲಿ ಶೇಖರಿಸಿಟ್ಟಿರುವ ಶಾಲಾ ಪಠ್ಯ ಪುಸ್ತಕಗಳ ಬಂಡಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.