ADVERTISEMENT

ಕೋಲಾರ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಭಾರಿ ಪ್ರಯತ್ನ

ಕೆ.ಓಂಕಾರ ಮೂರ್ತಿ
Published 9 ಫೆಬ್ರುವರಿ 2024, 5:46 IST
Last Updated 9 ಫೆಬ್ರುವರಿ 2024, 5:46 IST
ಅಧ್ಯಯನ ಚಟುವಟಿಕೆಗಳಲ್ಲಿ ತೊಡಗಿದ್ದ ಮಾಸ್ತಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು
ಅಧ್ಯಯನ ಚಟುವಟಿಕೆಗಳಲ್ಲಿ ತೊಡಗಿದ್ದ ಮಾಸ್ತಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು   

ಕೋಲಾರ: ದ್ವಿತೀಯ ‍ಪಿಯು ಪರೀಕ್ಷೆಗೆ ಕೇವಲ 20 ದಿನಗಳು ಬಾಕಿ ಇದ್ದು, ಜಿಲ್ಲೆಯ ರ‍್ಯಾಂಕಿಂಗ್‌ ಉತ್ತಮಪಡಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಭಾರಿ ಕಸರತ್ತು ನಡೆಸುತ್ತಿದೆ.

ಫಲಿತಾಂಶದಲ್ಲಿ ಬಹಳ ಹಿಂದುಳಿದಿರುವ ಜಿಲ್ಲೆಯ ರ‍್ಯಾಂಕಿಂಗ್‌ ಸುಧಾರಿಸಲು ಈ ಬಾರಿ ಜಿಲ್ಲಾಧಿಕಾರಿ ಅಕ್ರಂ ಪಾಷ ನೇತೃತ್ವದಲ್ಲಿ ಹಲವಾರು ಸಭೆ, ಕಾರ್ಯಾಗಾರ ನಡೆದಿದೆ. ಕನಿಷ್ಠ ಐದು ಸ್ಥಾನದೊಳಗೆ ಕಾಣಿಸಿಕೊಳ್ಳಬೇಕೆಂದು ಗುರಿ ನಿಗದಿಪಡಿಸಿದ್ದಾರೆ.

ಈ ಸೂಚನೆಯನ್ನು ಸವಾಲಾಗಿ ಸ್ವೀಕರಿಸಿರುವ ಡಿಡಿಪಿಯು ರಾಮಚಂದ್ರಪ್ಪ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳು ಫಲಿತಾಂಶ ಸುಧಾರಣೆಗೆ ಭಾರಿ ಪ್ರಯತ್ನ ಹಾಕುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳಂತೆ ಉಪನ್ಯಾಸಕರಿಗೂ ಅಗ್ನಿಪರೀಕ್ಷೆ ಎದುರಾಗಿದೆ.

ADVERTISEMENT

2021–22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕೇವಲ ಶೇ 60.41 ಫಲಿತಾಂಶದೊಂದಿಗೆ 24ನೇ ಸ್ಥಾನಕ್ಕೆ ಕುಸಿದಿತ್ತು. 2022–23ನೇ ಸಾಲಿನಲ್ಲಿ ಶೇ 79.2 ಫಲಿತಾಂಶದೊಂದಿಗೆ ಚೇತರಿಸಿಕೊಂಡು 14ನೇ ಸ್ಥಾನಕ್ಕೆ ಜಿಗಿದಿತ್ತು.

‘ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು, ಕಡಿಮೆ ಅಂಕ ಪಡೆದವರತ್ತ ವಿಶೇಷ ಗಮನ ಹರಿಸಿದ್ದೇವೆ. ಅವರಿಗೆ ನಿತ್ಯ ಬೆಳಿಗ್ಗೆ 8.30ರಿಂದ 9.30ರವರೆಗೆ ಹೆಚ್ಚುವರಿ ತರಗತಿ ಹಾಗೂ ಮಧ್ಯಾಹ್ನ 3.30ರಿಂದ 4.30 ಗಂಟೆವರೆಗೆ ಗುಂಪು ಅಧ್ಯಯನ ನಡೆಸಲಾಗುತ್ತಿದೆ’ ಎಂದು ಡಿಡಿಪಿಯು ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಬಾರಿ ವಿಜ್ಞಾನ ವಿಭಾಗದಲ್ಲಿ ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನ ಎಸ್.ಎಂ‌.ಕೌಶಿಕ್ (ಶೇ 99.33) ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಮೊದಲ ಬಾರಿ ಜಿಲ್ಲೆ ಈ ಸಾಧನೆ ಮಾಡಿತ್ತು. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಬಂದಿತ್ತು. 

ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಡಿಡಿಪಿಯು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಭೆ ನಡೆದಿದೆ. ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

‘ದ್ಪಿತೀಯ ಪಿಯು ಪರೀಕ್ಷೆ ಮಕ್ಕಳ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟ ಕೂಡ. ಹೀಗಾಗಿ, ವಿಷಯವಾರು ಕಾರ್ಯಾಗಾರ ನಡೆಸಲಾಗಿದೆ. ಎಲ್ಲಾ ವಿಷಯಗಳಲ್ಲಿ ಪ್ರಶ್ನೆ ಪತ್ರಿಕೆ ಕೈಪಿಡಿ ಮಾಡಿ ಮಕ್ಕಳನ್ನು ಸಜ್ಜುಗೊಳಿಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಉತ್ತರ ಬರೆಸಿದ್ದೇವೆ’ ಎಂದರು.

ಅಧ್ಯಯನದಲ್ಲಿ ತೊಡಗಿದ್ದ ಮಾಸ್ತಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು
ರ‍್ಯಾಂಕಿಂಗ್‌ನಲ್ಲಿ ಸುಧಾರಣೆ ಕಾಣುತ್ತಿದ್ದೇವೆ. ರಾಜ್ಯಮಟ್ಟದಲ್ಲಿ 24ನೇ ಸ್ಥಾನದಲ್ಲಿದ್ದವರು ಕಳೆದ ವರ್ಷ 14ನೇ ಸ್ಥಾನ ಪಡೆದೆವು. ಈ ಬಾರಿ ಅಗ್ರ ಐದು ಸ್ಥಾನದೊಳಗೆ ಬರುವ ವಿಶ್ವಾಸವಿದೆ
- ರಾಮಚಂದ್ರಪ್ಪ ಡಿಡಿಪಿಯು ಕೋಲಾರ

ಮಾರ್ಚ್‌ 1ರಿಂದ ಪರೀಕ್ಷೆ

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ 1ರಿಂದ 22ರವರೆಗೆ ನಡೆಯಲಿವೆ. ಬೆಳಿಗ್ಗೆ 10.15ಕ್ಕೆ ಆರಂಭವಾಗಿ ಮಧ್ಯಾಹ್ನ 1.30ರವರೆಗೆ ಸಮಯಾವಕಾಶ ಇರಲಿದೆ. ಜಿಲ್ಲೆಯಲ್ಲಿ 33 ಸರ್ಕಾರಿ ಹಾಗೂ 12 ಅನುದಾನಿತ ಕಾಲೇಜುಗಳಿದ್ದು ಸುಮಾರು 16 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.