ಮುಳಬಾಗಿಲು: ತಾಲ್ಲೂಕಿನ ಕೊಲದೇವಿ ಪ್ರಸನ್ನ ಚೌಡೇಶ್ವರಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ದುಗ್ಗಸಂದ್ರ ಹೋಬಳಿ ವ್ಯಾಪ್ತಿಯ ಒಂದರಿಂದ ಹತ್ತನೆಯ ತರಗತಿಯ ಸುಮಾರು 50ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡಾಕೂಟಗಳಲ್ಲಿ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಪಿ. ಸೋಮೇಶ್, ವಿಶೇಷ ಚೇತನ ಮಕ್ಕಳನ್ನು ಎಲ್ಲಾ ರಂಗಗಳಲ್ಲೂ ಹಾಗೂ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಶಿಕ್ಷಕರು ಹಾಗೂ ಪೋಷಕರು ವೇದಿಕೆ ಕಲ್ಪಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರ ಮಾತನಾಡಿ, ವಿಶೇಷ ಚೇತನ ಮಕ್ಕಳು ಯಾವುದೇ ಕಾರಣಕ್ಕೂ ಮಾನಸಿಕವಾಗಿ ಕುಗ್ಗದೆ, ಹಿಂಜರಿಯದೇ, ಕೀಳರಿಮೆ ಬೆಳೆಸಿಕೊಳ್ಳದೇ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ನಾರಾಯಣಸ್ವಾಮಿ, ಸುಧೀರ್, ಶಿವಕುಮಾರ್, ಸುಜಾತಮ್ಮ, ಮುನಿಸ್ವಾಮಿ, ಮಂಜುಳಾ ಕೆ., ಆರತಿ, ಸುರೇಶ್ , ಸಿ.ಎನ್. ರಮೇಶ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.