ADVERTISEMENT

‘ಬೆಸ್ಕಾಂ ನಡಿಗೆ ನಿಮ್ಮ ಮನೆ ಬಾಗಿಲಿಗೆ’ ಯೋಜನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:42 IST
Last Updated 21 ಸೆಪ್ಟೆಂಬರ್ 2021, 4:42 IST
ಮಾಲೂರಿನ ಶಿವಾರ ಪಟ್ಟಣದಲ್ಲಿ ಬೆಸ್ಕಾಂ ಇಲಾಖೆಯ ಎಇಇ ಅಪ್ಸರ್ ಪಾಷ ಮತ್ತು ಸಿಬ್ಬಂದಿ ಶಿವಾರ ಪಟ್ಟಣ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುವುದು
ಮಾಲೂರಿನ ಶಿವಾರ ಪಟ್ಟಣದಲ್ಲಿ ಬೆಸ್ಕಾಂ ಇಲಾಖೆಯ ಎಇಇ ಅಪ್ಸರ್ ಪಾಷ ಮತ್ತು ಸಿಬ್ಬಂದಿ ಶಿವಾರ ಪಟ್ಟಣ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುವುದು   

ಮಾಲೂರು: ತಾಲ್ಲೂಕಿನ ಗಡಿ ಗ್ರಾಮಗಳು ಹಾಗೂ ಹೆಚ್ಚು ವಿದ್ಯುತ್ ಸಮಸ್ಯೆ ಇರುವ ಗ್ರಾಮಗಳಿಗೆ ಬೆಸ್ಕಾಂ ಇಲಾಖೆಯ ಎಲ್ಲ ಸಿಬ್ಬಂದಿಯೊಂದಿಗೆ ಬೆಸ್ಕಾಂ ನಡಿಗೆ ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆ ಅಡಿ ಭೇಟಿ ನೀಡಿ ಸ್ಥಳದಲ್ಲೆ ಸಮಸ್ಯೆಗಳನ್ನು ಪರಿಹಸಿಸುವ ಕಾರ್ಯಕ್ಕೆ ಮುಂದಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಗಡಿ ಗ್ರಾಮಗಳು ಹಾಗೂ ಹೆಚ್ಚು ವಿದ್ಯುತ್ ಸಮಸ್ಯೆಗಳನ್ನು ಹೊಂದಿರುವ ಗ್ರಾಮಗಳಿಗೆ ಇಲ್ಲಿನ ಬೆಸ್ಕಾಂ ಇಲಾಖೆಯ ಎಇಇ ಪಾಷ ಅವರ ನೇತೃತ್ವದಲ್ಲಿ ಪ್ರತಿ ಭಾನುವಾರ ಭೇಟಿ ನೀಡಿ ಸ್ಥಳದಲ್ಲೇ ವಿದ್ಯುತ್ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಕಾರ್ಯಕ್ರಮವನ್ನು ಇಲ್ಲಿನ ಬೆಸ್ಕಾಂ ಇಲಾಖೆ
ಆರಂಭಿಸಿರುವುದನ್ನು ಶಿವಾರ ಪಟ್ಟಣ ಗ್ರಾಮಸ್ಥರು ಸ್ವಾಗತಿಸಿದ್ದಾರೆ.

ಶಿಲ್ಪಿ ಗ್ರಾಮ ಶಿವಾರ ಪಟ್ಟಣ ಗ್ರಾಮಕ್ಕೆ ಭಾನುವಾರ ಸುಮಾರು 88 ಬೆಸ್ಕಾಂ ಸಿಬ್ಬಂದಿಯೊಂದಿಗೆ ಎಇಇ ಪಾಷ ಭೇಟಿ ನೀಡಿ ದಿನಪೂರ್ತಿ ಗ್ರಾಮದಲ್ಲೇ ಉಳಿದು ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಮುಂದಾದರು.

ADVERTISEMENT

ಪ್ರತಿ ಮನೆ ಸೇರಿದಂತೆ ಗ್ರಾಮದಲ್ಲಿ ಹಾದು ಹೋಗಿರುವ ಎಲ್‌ಟಿ ಲೈನ್ ಮತ್ತು ಎಚ್‌ಟಿ ಲೈನ್‌ಗಳ ದುರಸ್ತಿ
ನಡೆಸಿದರು. ನಂತರ ಗ್ರಾಮದಲ್ಲಿ ಅಗತ್ಯವಿರುವ ಕಡೆ ವಿದ್ಯುತ್ ಕಂಬ ಅಳವಡಿಕೆ, ಟ್ರಾನ್ಸ್ ಫಾರ್ಮರ್ ಕ್ಲೀನಿಂಗ್, ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ, ಮೀಟರ್ ಬದಲಾವಣೆ ಹೀಗೆ ಗ್ರಾಮದಲ್ಲಿರುವ ಪ್ರತಿ ಮನೆಯಿಂದ ಬರುವ ದೂರಗಳನ್ನು ಆದರಿಸಿ ಸ್ಥಳದಲ್ಲೆ ನಿವಾರಣೆ ಕಾರ್ಯ ನಡೆಸಿದರು. ರೈತರಿಗೆ ಅನುಕೂಲವಾಗುವಂತೆ ಟ್ರಾನ್ಸ್‌ಪಾರ್ಮ್ ಅಳವಡಿಕೆ ಕಾರ್ಯ ನಡೆಸಿದರು.

ವಿದ್ಯುತ್ ಶುಲ್ಕ ಸಂಗ್ರಹ: ಗ್ರಾಮಸ್ಥರಲ್ಲಿ ಬೆಸ್ಕಾಂ ಇಲಾಖೆಯ ಲೆಕ್ಕಾಧಿಕಾರಿಗಳು ವಿದ್ಯುತ್ ಕಳವು ಕಾನೂನು ವಿರೋಧವಾಗಿದ್ದು, ಗ್ರಾಮಸ್ಥರು ವಿದ್ಯುತ್ ಕಳವು ಮಾಡಬಾರದು. ಅದೇ ರೀತಿ
ವಿದ್ಯುತ್ ಶುಲ್ಕ ಪ್ರತಿಯೊಬ್ಬರು ಪಾವತಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ವಿದ್ಯುತ್ ಬಾಕಿ ಹಣ ಸುಮಾರು ₹1.30 ಲಕ್ಷದಷ್ಟು ವಿದ್ಯುತ್ ಶುಲ್ಕ ಸಂಗ್ರಹವಾಗಿದೆ ಎಂದು ಬೆಸ್ಕಾಂ ಇಲಾಖೆ ಲೆಕ್ಕಾಧಿಕಾರಿ ವಿಜಯಕುಮಾರ್ ತಿಳಿಸಿದರು.

ಪ್ರತಿ ಭಾನುವಾರ ಬೆಸ್ಕಾಂ ನಡಿಗೆ ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆ ಅಡಿ ತಾಲ್ಲೂಕಿನ ಗಡಿ ಗ್ರಾಮಗಳು ಹಾಗೂ ವಿದ್ಯುತ್ ಸಮಸ್ಯೆ ಹೊಂದಿರುವ ಗ್ರಾಮಗಳಿಗೆ ಬೆಸ್ಕಾಂ ಸಿಬ್ಬಂದಿಯೊಂದಿಗೆ ಭೇಟಿ ನೀಡಿ
ಸ್ಥಳದಲ್ಲೇ ಸಮಸ್ಯೆ ನಿವಾರಣೆ ಮಾಡಲಾಗುವುದು. ಗ್ರಾಹಕರ ಸಮಸ್ಯೆ ನಿವಾರಣೆ ಜೊತೆಗೆ ವಿದ್ಯುತ್ ಶುಲ್ಕದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ವಿದ್ಯುತ್ ಶುಲ್ಕ ಪಾವತಿಸಲು ಮುಂದಾದರು ಎಂದು ಬೆಸ್ಕಾಂ ಇಲಾಖೆ ಎಇಇ ಅನ್ಸಾರ್ ಪಾಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.