ಕೋಲಾರ: ‘ಜಿಲ್ಲೆಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ಷ್ಮತೆ, ಸಂವೇದನೆ ಕಳೆದುಕೊಂಡಿದ್ದಾರೆ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ರೈತರ ಮೇಲೆ ದೌರ್ಜನ್ಯವೆಸಗಿದರೆ, ವಿನಾಕಾರಣ ತೊಂದರೆ ನೀಡಿದರೆ, ಸುಖಾಸುಮ್ಮನೇ ಅಲೆಸಿದರೆ ಅಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಎಚ್ಚರಿಕೆ ನೀಡಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೃಷಿ ಸಂಸ್ಕೃತಿ ಕೇಂದ್ರದ ಆಶ್ರಯದಲ್ಲಿ ನಡೆದ 46ನೇ ರೈತ ಹುತಾತ್ಮರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ತಹಶೀಲ್ದಾರ್, ಶಿರಸ್ತೇದಾರರು, ಸರ್ವೇಯರ್‌ಗಳು, ಇತರ ಅಧಿಕಾರಿಗಳು ಕಚೇರಿಯಲ್ಲಿ ಸಿಗುತ್ತಿಲ್ಲ, ತೊಂದರೆ ಕೊಡುತ್ತಾರೆ ಎಂಬುದಾಗಿ ರೈತರು ನನಗೆ ದೂರು ನೀಡಿದ್ದಾರೆ. ಈಗಾಗಲೇ ಹಲವರ ಮೇಲೆ ಕ್ರಮ ವಹಿಸಿದ್ದೇನೆ. ಜಿಲ್ಲಾಧಿಕಾರಿ ಸುಲಭವಾಗಿ ಸಿಗುತ್ತಾರೆ, ಉಳಿದ ಅಧಿಕಾರಿಗಳು ಸಿಗುತ್ತಿಲ್ಲವೆಂದು ರೈತರೇ ಹೇಳುತ್ತಿದ್ದಾರೆ’ ಎಂದರು.
‘ಒಂದು ಕಾಲದಲ್ಲಿ ರೈತ ಚಳವಳಿ, ದಲಿತ ಚಳವಳಿ ಎಂದರೆ ಇಡೀ ಆಡಳಿತ ವರ್ಗ ಥರಗುಟ್ಟುತಿತ್ತು, ಸರ್ಕಾರಗಳು ಅಲುಗಾಡುತ್ತಿದ್ದವು. ಅದು ರೈತ ಸಮುದಾಯದ ತಾಕತ್ತು, ಅದು ಅವರ ಅಸ್ಮಿತೆ ಕೂಡ ಆಗಿತ್ತು. ನೆಲದ ಬೇರು, ನೆಲದೊಂದಿಗೆ ಅನುಸಂಧಾನ ಇದಕ್ಕೆ ಕಾರಣ’ ಎಂದರು.
‘ಕೃಷಿ ಕೇವಲ ಬದುಕು ಕಟ್ಟಿ ಕೊಡುವುದಿಲ್ಲ; ಒಂದು ಸಂಸ್ಕೃತಿ ಕಟ್ಟಿ ಕೊಡುತ್ತದೆ. ಸಮಸ್ಯೆಗಳು ಬಗೆಹರಿಯಬೇಕಾದರೆ ರೈತರಿಗೆ ಮನಸ್ಥೈರ್ಯ ಹಾಗೂ ನೈತಿಕ ಸ್ಥೈರ್ಯ ತುಂಬುವುದರೊಂದಿಗೆ ಸಮರ್ಥ ಆಡಳಿತ ಯಂತ್ರ ಹಾಗೂ ನಾಯಕತ್ವದ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು.
‘ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಇಲ್ಲದಿದ್ದರೂ ಇಲ್ಲಿನ 3,232 ಕೆರೆಗಳು ಜೀವನಾಡಿಯಾಗಿವೆ. ಬರೀ ಜೀವಜಲ ಕಟ್ಟಿ ಕೊಡುತ್ತಿಲ್ಲ; ಬದುಕು ಕಟ್ಟಿ ಕೊಟ್ಟಿವೆ. ನೀರಿನ ಮಹತ್ವವನ್ನು ಕೋಲಾರದ ರೈತರಿಂದ ಇಡೀ ಕರ್ನಾಟಕ ಕಲಿಯಬೇಕಿದೆ. ಜಿಲ್ಲೆಯಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾಲ ಮಾಡಿದರೂ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.
‘ಕೃಷಿ ಈಗ ಒಂದು ಉದ್ಯಮವಾಗಿದೆ, ಕೃಷಿಕರು ಜಮೀನನ್ನು ಮಾರಾಟ ಮಾಡುತ್ತಿದ್ದಾರೆ. ಹಣಕ್ಕಾಗಿ ಭೂಮಿ ಮಾರಾಟ ಮಾಡುವುದು ಸರಿಯೇ? ಇರುವ ಭೂಮಿ ಕಳೆದುಕೊಂಡರೆ ತಿನ್ನಲು ನಾಳೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.
‘ಜಿಲ್ಲೆಯ ಕೆರೆಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ. 1,659 ಕೆರೆಗಳ ಸರ್ವೆ ಮುಗಿದಿದೆ. ಕೆಲವರು ಒತ್ತುವರಿ ಮಾಡಿಕೊಂಡಿದ್ದು ಅದನ್ನು ಎಐ ತಂತ್ರಜ್ಞಾನ ಬಳಸಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಶೇ 80 ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸಲಿದ್ದೇವೆ’ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ರೈತನ ಭುಜದ ಮೇಲೆ ಕೇವಲ ನೇಗಿಲು ಮಾತ್ರವಲ್ಲದೆ; ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಯೂ ಇದೆ. ಟವೆಲ್ ತೆಗೆದು ತೋರಿಸಿದರೆ ರೈಲು ಕೂಡ ನಿಲ್ಲುತ್ತದೆ. ಅವರ ಸಮಸ್ಯೆ ಅರ್ಥ ಮಾಡಿಕೊಂಡು ಬಗೆಹರಿಸಬೇಕು’ ಎಂದರು.
‘ರೈತರಿಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಕಚೇರಿಗೆ ಬರಬಹುದು, ಬಾಗಿಲು ಸದಾ ತೆರೆದಿರುತ್ತದೆ. ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ. ಪೊಲೀಸ್ ಠಾಣೆ ಸಿಬ್ಬಂದಿಯ ಸಭೆ ಕರೆದು ಚರ್ಚಿಸಿ ಸೂಚನೆ ನೀಡುತ್ತೇನೆ’ ಎಂದು ಹೇಳಿದರು.
ಅಧ್ಯಕ್ಷ ವಹಿಸಿದ್ದ ಕೃಷಿ ಸಂಸ್ಕೃತಿ ಕೇಂದ್ರದ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಸರ್ಕಾರ, ಕೆಐಎಡಿಬಿ ಮಾಡುತ್ತಿರುವ ದರೋಡೆ ಬಗ್ಗೆ ರೈತರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ರೈತರಿಗೆ ರಾಜಕೀಯ ಪ್ರಜ್ಞೆ ಬೇಕಾಗಿದೆ’ ಎಂದರು.
‘ರೈತರು ಇಂದು ಬರೀ ಹೊನ್ನು ಬಿತ್ತುತ್ತಿಲ್ಲ; ತಮ್ಮ ಕಣ್ಣೀರು, ರಕ್ತ ಬಿತ್ತುತ್ತಿದ್ದಾರೆ. ಅಂತಹ ಪರಿಸ್ಥಿತಿ ನಾವು ಕಾಣಬಹುದಾಗಿದೆ. ಮುಂದಿನ ಪೀಳಿಗೆ ತಮ್ಮ ಹೊಲಗಳಲ್ಲಿ ಬೀಜ ಬಿತ್ತಿ ಬೆಳೆ ಬೆಳೆಯಲ್ಲ; ಮದ್ದು ಗುಂಡುಗಳನ್ನು ಬೆಳೆಯಬೇಕಾಗುತ್ತದೆ. ಅಂಥ ಬಿಕ್ಕಟ್ಟಿನಲ್ಲಿ ನಾವಿದ್ದೇವೆ. ಪಾರಂಪರಿಕ ಕೃಷಿ ಹಾಳಾಗಿದೆ. ಮತ್ತೆ ಆ ಕಾಲಕ್ಕೆ ಹೋಗುತ್ತೇವೆ ಎಂಬ ಭರವಸೆ ಇಲ್ಲ. ರೈತರು ಸಂಘರ್ಷದಿಂದ ಸಾಮರಸ್ಯಕ್ಕೆ ಬಂದು ನಿಂತಿದ್ದಾರೆ. ಸಾಂಸ್ಕೃತಿಕ, ಬೌದ್ಧಿಕ ದಾರಿದ್ರ್ಯ ಇರಬಾರದು’ ಎಂದು ನುಡಿದರು.
‘ನಮ್ಮ ನೆಲದಲ್ಲಿ ನಾವು ಏಕೆ ಡ್ರ್ಯಾಗನ್ ಫ್ರುಟ್ ಬೆಳೆಯಬೇಕು? ನಮ್ಮದೇ ದೇಶದ ಹಣ್ಣುಗಳನ್ನು ಏಕೆ ಬೆಳೆಯಬಾರದು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ’ ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ‘ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಈಚೆಗೆ ದೇವನಹಳ್ಳಿ ಬಳಿ ಹಲವಾರು ವರ್ಷ ಹೋರಾಟ ನಡೆಸಿದ ಪರಿಣಾಮ ಭೂಮಿ ಉಳಿಯಿತು. ನಾವು ಅಭಿವೃದ್ಧಿಯ ವಿರೋಧಿಗಳು ಅಲ್ಲ, ಕೈಗಾರಿಕೆಗಳೂ ಆಗಬೇಕು. ಆದರೆ, ಫಲವತ್ತಾದ ಭೂಮಿ ಪಡೆಯಬೇಡಿ. ಬೆಂಗಳೂರು ಸುತ್ತಮುತ್ತ ಬಿಟ್ಟು ಬೇರೆ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಿ’ ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಆರ್.ಸುಮಾ, ‘ರೈತರನ್ನು ಬೆನ್ನೆಲೆಬು ಎನ್ನುತ್ತೇವೆ. ಹೀಗಾಗಿ, ಅವರನ್ನು ಕಾಪಾಡಿಕೊಳ್ಳುವ ಕೆಲಸ ನಡೆಯಬೇಕಿದೆ. ಇದು ಎಲ್ಲರ ಜವಾಬ್ದಾರಿ ಕೂಡ. ನಮ್ಮ ಜಿಲ್ಲೆಯ ರೈತರು ಶ್ರಮಜೀವಿಗಳು. ನೀರಿಲ್ಲದೆ ಹೆಚ್ಚು ಬೆಳೆ ಬೆಳೆಯುತ್ತಾರೆ. ಉತ್ತಮ ಕೃಷಿ ಮಾಡುತ್ತಿದ್ದಾರೆ’ ಎಂದರು.
ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು. ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ, ರಾಜ್ಯ ಉಪಾಧ್ಯಕ್ಷ ಬಸನಹಳ್ಳಿ ಬೈಚೇಗೌಡ, ಬಯಲುಸೀಮೆ ಕಾರ್ಯದರ್ಶಿ ಪ್ರಭಾಕರ್ ಗೌಡ, ರಾಜ್ಯ ಮಹಿಳಾ ಸಂಚಾಲಕಿ ರಾಧಮ್ಮ, ಸಂಚಾಲಕ ಕೆ.ಅನಂದಕುಮಾರ್, ಹರೀಶ್, ನರಸಿಂಹಪ್ಪ, ಶಂಕರ್, ಮುನಿವೆಂಕಟಪ್ಪ, ಸುರೇಶ್ ಪಾಲ್ಗೊಂಡಿದ್ದರು.
ರೈತರು ಹುಟ್ಟಿನಿಂದ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಎಲ್ಲವನ್ನೂ ಕೇಳಿ ಪಡೆಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ವ್ಯವಸ್ಥೆ ಕಾರಣವಾಗಿರುವುದು ವಿಷಾದನೀಯ. ಅನೇಕ ಸವಾಲು ಸಮಸ್ಯೆ ಇವೆಎಂ.ಆರ್.ರವಿ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಅಪಘಾತದಲ್ಲಿ ಈ ವರ್ಷ 267 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದ್ವಿಚಕ್ರ ವಾಹನ ಅಪಘಾತದಲ್ಲಿ ರೈತರು ಹೆಚ್ಚಾಗಿ ಮೃತಪಡುತ್ತಿದ್ದಾರೆ. ಹೀಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಬಳಸಿನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆರ್ಥಿಕ ದಿವಾಳಿಯಾಗಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರೂ ಇಂಥ ಕೆಲಸಕ್ಕೆ ಇಳಿಯಬಾರದು. ತಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಬಳಿ ಹೇಳಿಕೊಳ್ಳಿ. ಸಹಾಯ ಮಾಡುತ್ತೇವೆಅಬ್ಬಣಿ ಶಿವಪ್ಪ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ
ರೈತರ ಹಕ್ಕೊತ್ತಾಯಗಳು:
* ಬಗರ್ ಹುಕುಂ ಅರ್ಜಿ ಪರಿಶೀಲಿಸಿ ಭೂಮಿ ಮಂಜೂರು ಮಾಡಬೇಕು
* ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು
* ಅರಣ್ಯ ಇಲಾಖೆಯಿಂದ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು
* ಕೃಷ್ಣಾ ನದಿ ನೀರಿನ ಪಾಲನ್ನು ಕೋಲಾರಕ್ಕೆ ತರಬೇಕು
* ಗಂಗಾ ಕಲ್ಯಾಣ ಯೋಜನೆಯಿಂದ ದಲಿತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು
* ರೈತ ವಿರೋಧ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು
* ಸ್ವಾಮಿನಾಥನ್ ವರದಿ ಜಾರಿ ಮಾಡಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು
ಮಾವು ಬೆಂಬಲ ಬೆಲೆ; ವಿಸ್ತರಣೆಗೆ ಪ್ರಸ್ತಾವ
‘ಬೆಂಬಲ ಬೆಲೆಯಡಿ ಮಾವು ಮಾರಾಟ ನೋಂದಣಿಗೆ ಜುಲೈ 24 ಕಡೆಯ ದಿನವಾಗಿದೆ. ಈವರೆಗೆ 13869 ರೈತರು ನೋಂದಣಿ ಮಾಡಿಕೊಂಡಿದ್ದು ಸುಮಾರು 10 ಸಾವಿರ ರೈತರು ಬಿಲ್ ನೀಡಿದ್ದಾರೆ. ಉಳಿದವರು ಎಪಿಎಂಸಿಗೆ ಮಾರಾಟ ಮಾಡಿದ್ದು ಬೇಗನೇ ಬಿಲ್ ಕೊಡಬೇಕು. ಖಾತೆಗೆ ಹಣ ಹೋಗಲು ಪ್ರಾರಂಭವಾಗಿದೆ. ರೈತರ ಮನವಿ ಮೇರೆಗೆ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. 15 ದಿನ ವಿಸ್ತರಿಸಲು ಮನವಿ ಮಾಡಿದ್ದೇನೆ’ ಎಂದು ಎಂ.ಆರ್.ರವಿ ಹೇಳಿದರು.
ಬಗರ್ ಹುಕುಂ ನಡಿ 56 ಸಾವಿರ ಅರ್ಜಿ:
‘ಬಗರ್ ಹುಕುಂನಡಿ ಫಾರಂ 50 53 ಹಾಗೂ 57 ಸಂಬಂಧ ಜಿಲ್ಲೆಯಲ್ಲಿ 56 ಸಾವಿರ ಅರ್ಜಿಗಳಿವೆ. ಅರ್ಹತೆಯ ಆಧಾರದ ಮೇಲೆ ಬಗರ್ ಹುಕುಂ ಸಕ್ರಮೀಕರಣ ಸಮಿತಿಗೆ ಶಿಫಾರಸು ಮಾಡಿದ್ದು ತಾಲ್ಲೂಕುವಾರು ಸಭೆಗಳು ನಡೆಯುತ್ತಿವೆ. ಎಲ್ಲಾ ಅರ್ಜಿಗಳು ಮಂಜೂರಾತಿಗೆ ಅರ್ಹತೆ ಪಡೆದುಕೊಂಡಿಲ್ಲ’ ಎಂದು ಎಂ.ಆರ್.ರವಿ ಹೇಳಿದರು. ‘ಅರ್ಜಿಗಳನ್ನು ಸಮಿತಿಗಳ ಮೂಲಕ ವಿಲೇವಾರಿ ಮಾಡಲು ಜಿಲ್ಲಾಡಳಿ ಕ್ರಮ ವಹಿಸಿದೆ. ಪೋಡಿ ಮಾಡುವ ಕೆಲಸ ನಡೆಯುತ್ತಿದೆ. 8729 ಅರ್ಹ ಪೋಡಿ ಅರ್ಜಿಗಳು ನಮ್ಮ ಮುಂದಿವೆ. ಕಳೆದ ಆರು ತಿಂಗಳಲ್ಲಿ 5 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಜಿಲ್ಲೆಗೆ ಮುಖ್ಯಮಂತ್ರಿ ಬಂದಾಗ ರೈತರಿಗೆ ಆರ್‌ಟಿಸಿ ವಿತರಿಸುತ್ತೇವೆ’ ಎಂದರು.
ಸರ್ವೆ ಮುಗಿಯುವವರೆಗೆ ಒಕ್ಕಲೆಬ್ಬಿಸಲ್ಲ:
‘ಜಂಟಿ ಸರ್ವೆ ಮುಗಿಯುವವರೆಗೆ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಸರ್ವೆ ಮುಗಿದ ಬಳಿಕ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಎಂ.ಆರ್.ರವಿ ವಿಶ್ವಾಸ ವ್ಯಕ್ತಪಡಿಸಿದರು. ‘ತಮ್ಮ ವ್ಯಾಪ್ತಿ ಎಷ್ಟು ಬೌಂಡರಿ ಎಷ್ಟು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರಿಯಾಗಿ ಗೊತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮೀಸಲು ಅರಣ್ಯ ಪರಿಭಾವಿತ (ಡೀಮ್ಡ್) ಅರಣ್ಯ ಹಾಗೂ ರೆಕಾರ್ಡ್ ಅರಣ್ಯದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.