ADVERTISEMENT

ಯಾದವ ಸಮುದಾಯ ಎಸ್‌ಟಿಗೆ ಸೇರಿಸಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 16:40 IST
Last Updated 25 ಜುಲೈ 2019, 16:40 IST

ಕೋಲಾರ: ‘ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದವ ಸಮುದಾಯವನ್ನು ಪರಿಶಿಷ್ಟಪಂಗಡದ (ಎಸ್‌ಟಿ) ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೋಕುಲ್ ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಯಾದವ ಸಮುದಾಯದ ಜನಸಂಖ್ಯೆ ಸುಮಾರು 40 ಲಕ್ಷವಿದೆ. ಸಮುದಾಯಕ್ಕೆ ಸೇರಿದ ಗುಬ್ಬಿ ಕ್ಷೇತ್ರದ ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯಾದವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಾಗಿ ಹಾಗೂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಈಗ ಕಾಲ ಕೂಡಿ ಬಂದಿದ್ದು, ಯಡಿಯೂರಪ್ಪ ತಮ್ಮ ಮಾತು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಹಿರಿಯೂರು ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಮುದಾಯದ ಇಬ್ಬರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿತ್ತು. ಆದರೆ, ಹಿರಿಯೂರು ಕ್ಷೇತ್ರದಲ್ಲಿನ ಸಮುದಾಯದ ಅಭ್ಯರ್ಥಿ ಸೋತರು. ಗುಬ್ಬಿ ಕ್ಷೇತ್ರದಲ್ಲಿ ಪೂರ್ಣಿಮಾ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಸಮುದಾಯದ ಜಯಮ್ಮ ಎಂಬುವರನ್ನು ಈ ಹಿಂದೆ ವಿಧಾನ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿತ್ತು’ ಎಂದು ವಿವರಿಸಿದರು.

‘ಸಮುದಾಯದವರು ಗೊಲ್ಲ, ಗೌಳಿ ಮುಂತಾದ ಹೆಸರಲ್ಲಿ ವಿಭಜನೆಯಾಗಿದ್ದಾರೆ. ಸಮುದಾಯದಲ್ಲಿ ಅನೇಕ ಉಪ ಜಾತಿಗಳಿವೆ. ನಾವು ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು’ ಎಂದು ಕೋರಿದರು.

ಸಂಘದ ಉಪಾಧ್ಯಕ್ಷ ಗೋಪಾಲ್, ಸದಸ್ಯರಾದ ವೆಂಕಟೇಶ್, ಮಣಿ, ಜನಾರ್ದನನಾಯ್ಡು, ಅಯ್ಯಪ್ಪ, ಆದಿನಾರಾಯಣ, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.