ADVERTISEMENT

ಕೋಲಾರ– ಅಂತರಗಂಗೆ ರಸ್ತೆ ಅಭಿವೃದ್ಧಿ ನೆಪದಲ್ಲಿ ಹೆಚ್ಚುವರಿ ಮರ ಕಡಿತ: ಆಕ್ರೋಶ

ಕೆ.ಓಂಕಾರ ಮೂರ್ತಿ
Published 9 ಡಿಸೆಂಬರ್ 2023, 6:55 IST
Last Updated 9 ಡಿಸೆಂಬರ್ 2023, 6:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲಾರ: ಕೋಲಾರ ನಗರದ ಅಂತರಗಂಗೆ ರಸ್ತೆ ಅಭಿವೃದ್ಧಿ ಉದ್ದೇಶದಿಂದ 10 ಮರಗಳ ಹನನಕ್ಕೆ ಅನುಮತಿ ಪಡೆದು 17 ಮರಗಳನ್ನು ಕತ್ತರಿಸಿರುವುದು ಬೆಳಕಿಗೆ ಬಂದಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಿಗ್ನಲ್‌ನಿಂದ ಹಿಡಿದು ಕೀಲುಕೋಟೆ ರೈಲ್ವೆ ಸೇತುವೆವರೆಗೆ ವಿವಿಧ ಪ್ರಬೇಧದ 17 ಮರಗಳನ್ನು ಕತ್ತರಿಸಲಾಗಿದೆ.

ADVERTISEMENT

ವಾರದಿಂದ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ವಾಹನಗಳ ಸುಗಮ ಸಂಚಾರ ದೃಷ್ಟಿಯಿಂದ ಅಂತರಗಂಗೆ ರಸ್ತೆ ಅಭಿವೃದ್ಧಿಗಾಗಿ ಮರ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು 10 ಮರಗಳನ್ನು ಗುರುತಿಸಿ ಅವುಗಳ ತೆರವಿಗೆ ಸುಮಾರು ₹ 55 ಸಾವಿರ ಮೊತ್ತಕ್ಕೆ ಮುಕ್ತ ಹರಾಜು ಕರೆದಿದ್ದರು.

‘ಟೆಂಡರ್‌ನಲ್ಲಿ ಹರಾಜು ಪಡೆದಿದ್ದ ಗುತ್ತಿಗೆದಾರರು 17 ಮರ ತೆರವುಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ಮರ ತೆರವುಗೊಳಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದು ಅಲ್ಲದೇ, ಪರಿಸರಕ್ಕೂ ಹಾನಿ ಆಗಿದೆ. ಈ ಸಂಬಂಧ ನೋಟಿಸ್‌ ನೀಡಿದ್ದು, ಹೆಚ್ಚು ಮರಗಳ ಹನನ ವಿಚಾರದಲ್ಲಿ ದಂಡ ಸಮೇತ ಹಣ ವಸೂಲಿ ಮಾಡಲಿದ್ದೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕೈದು ಗುಲ್‌ ಮೋಹರ್‌ ಮರ, ಏಳೆಂಟು ಅಶೋಕ ಮರ, ನಾಲ್ಕು ಮಹಗನಿ ಮರಗಳು ಇದರಲ್ಲಿ ಸೇರಿವೆ.

‘ಅಂತರಗಂಗೆ ರಸ್ತೆಯಲ್ಲಿರುವ ಕೆಲ ಮರಗಳಿಂದ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ವಾಹನ ಸವಾರರಿಂದ ದೂರುಗಳು ಬಂದಿದ್ದವು. ಕೆಲ ಮರಗಳ ಕೊಂಬೆ ರಸ್ತೆಗೆ ಬಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ತೊಂದರೆ ಉಂಟಾಗುತಿತ್ತು. ಜೊತೆಗೆ ರಸ್ತೆಯು ಐದೂವರೆ ಮೀಟರ್‌ ಇರಬೇಕಿತ್ತು. ಈ ಹಿನ್ನೆಲೆಯಲ್ಲಿ ಕೆಲ ಮರಗಳ ತೆರವಿಗೆ ಮನವಿ ಮಾಡಿದ್ದೆವು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ರಾಮಮೂರ್ತಿ ಹೇಳಿದರು.

ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚುವರಿ ಮರಗಳ ತೆರವಿಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಿದ್ದರು ಎಂದು ಮೂಲಗಳು ತಿಳಿಸಿವೆ. ಮರ ಕಡಿದಿರುವುದಕ್ಕೆ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ.

ಗುತ್ತಿಗೆದಾರರ ವಿರುದ್ಧ ಪ್ರಕರಣ

‘ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಾಗಿ ಮರ ಕತ್ತರಿಸಿರುವ ಗುತ್ತಿಗೆದಾರರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಮುಂದೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ಇಲಾಖೆಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಡಿಸಿಎಫ್‌ ವಿ.ಏಡುಕೊಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿ ಮರ ತೆರವುಗೊಳಿಸಿರುವ ಮಾಹಿತಿಯನ್ನು ಸಾರ್ವನಿಕರೊಬ್ಬರು ನೀಡಿದರು. ಎಷ್ಟು ಮರಕ್ಕೆ ಅನುಮತಿ ನೀಡಿರುತ್ತೇವೆಯೋ ಅಷ್ಟು ಮರ ಕತ್ತರಿಸಬೇಕು. ಆದರೆ, ಯಾರೂ ಗಮನಿಸುವುದಿಲ್ಲವೆಂದು ನಿಯಮ ಉಲ್ಲಂಘಿಸಿ ಹೆಚ್ಚುವರಿ ಮರ ಕತ್ತರಿಸುವುದು ಕಳ್ಳತನವಾಗುತ್ತದೆ’ ಎಂದರು.

ಅಭಿವೃದ್ಧಿ ನೆಪದಲ್ಲಿ ಮರ ಕಡಿದದ್ದು ತಪ್ಪು

ಅಭಿವೃದ್ಧಿ ನೆಪದಲ್ಲಿ ಮರ ತೆರವುಗೊಳಿಸುವುದು ತಪ್ಪು. ಈಗಾಗಲೇ ವಾತಾವರಣದಲ್ಲಿ ಭಾರಿ ಏರುಪೇರು ಉಂಟಾಗುತ್ತಿದೆ. ಒಂದು ಮರ ಕಡಿದರೂ ತೊಂದರೆಯೇ. ಟೆಂಡರ್‌ಗೂ ಮೊದಲೇ ಗೊತ್ತಿದ್ದರೆ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಅಪಘಾತವಾಗುವುದು ರಸ್ತೆ ಗುಂಡಿಗಳಿಂದ. ಹೀಗಾಗಿ, ಸರಿಯಾಗಿ ಡಾಂಬರೀಕರಣ ಮಾಡಿ ಗುಂಡಿ ಮುಚ್ಚಬೇಕು

ಕೆ.ರಮೇಶ್‌, ಪ್ರಧಾನ ಕಾರ್ಯದರ್ಶಿ,ಪರಿಸರ ಹಿತರಕ್ಷಣೆ ಸಮಿತಿ

ಪರ್ಯಾಯವಾಗಿ ಗಿಡ ನೆಡಬೇಕಿತ್ತು

ದೊಡ್ಡ ಮರಗಳನ್ನೇ ಉರುಳಿಸಿದ್ದಾರೆ. ರಸ್ತೆಗಂಟಿಕೊಂಡಿರುವ ಚಿಕ್ಕ ಮರಗಳನ್ನು ಬಿಟ್ಟಿದ್ದಾರೆ. ಮರ ಕಡಿದಿದ್ದಕ್ಕೆ ಪರ್ಯಾಯವಾಗಿ ಗಿಡ ನೆಡಬೇಕಿತ್ತು. ಆ ಕೆಲಸ ಮಾಡಿಲ್ಲ. ರಸ್ತೆ ಅಭಿವೃದ್ಧಿ ಎಂದು ಮರಗಳ ಕಡಿಯುವುದೇ? ಎಲ್ಲಾ ಕಡೆ ಇದೇ ಕೆಲಸ ಮಾಡಿಕೊಂಡು ಹೋದರೆ ಅರಣ್ಯ ಉಳಿಯುವುದಾದರೂ ಹೇಗೆ?

ಮಹೇಶ್‌ ರಾವ್‌ ಕದಂ, ಪರಿಸರವಾದಿ

ಅಂತರಗಂಗೆ ರಸ್ತೆಯಲ್ಲಿ ಕೆಲ ಮರಗಳಿಂದ ಸಂಚಾರಕ್ಕೆ ತೊಂದರೆ ಆಗಿತ್ತು. ಅಪಘಾತಕ್ಕೆ ಆಸ್ಪದ ನೀಡುವಂತಿದ್ದವು. ಹೀಗಾಗಿ, ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೆವು
ರಾಮಮೂರ್ತಿ, ಕಾರ್ಯಪಾಲಕ ಎಂಜಿನಿಯರ್‌, ಪಿಡಬ್ಲ್ಯುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.