ADVERTISEMENT

ಕಾನೂನು ಸಲಹಾ ಪೆಟ್ಟಿಗೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:12 IST
Last Updated 19 ಜನವರಿ 2021, 15:12 IST
ಕಾನೂನು ಸಲಹಾ ಪೆಟ್ಟಿಗೆ ಅಳವಡಿಕೆ
ಕಾನೂನು ಸಲಹಾ ಪೆಟ್ಟಿಗೆ ಅಳವಡಿಕೆ   

ಕೋಲಾರ:‘ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡರ ಅಧ್ಯಕ್ಷತೆಯಲ್ಲಿ ನೇಮಿಸಿರುವ ಬಡತನ ನಿರ್ಮೂಲನಾ ಯೋಜನೆ–2015ರ ಸಮಿತಿಯ ಶಿಫಾರಸ್ಸಿನ ಅನ್ವಯ ಗ್ರಾ.ಪಂ ಮತ್ತು ಪೊಲೀಸ್ ಠಾಣೆಗಳಲ್ಲಿ ಕಾನೂನು ಸಲಹಾ ಪೆಟ್ಟಿಗೆ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಸಲಹಾ ಪೆಟ್ಟಿಗೆ ಅಳವಡಿಕೆ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳು ಮತ್ತು ಗ್ರಾ.ಪಂ ಕಾರ್ಯಾಲಯಗಳಲ್ಲಿ ಸಲಹಾ ಪೆಟ್ಟಿಗೆ ಅಳವಡಿಸಲಾಗುತ್ತದೆ’ ಎಂದು ವಿವರಿಸಿದರು.

‘ಸಲಹಾ ಪೆಟ್ಟಿಗೆಗಳ ಮೂಲಕ ಬಂದ ದೂರುಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗಳಿಂದ ಪರಿಹರಿಸಲಾಗುತ್ತದೆ. ಸರ್ಕಾರಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕರಿಗೆ ಅಥವಾ ಫಲಾನುಭವಿಗಳಿಗೆ ಸರ್ಕಾರದ ಯೋಜನೆ, ಸೇವೆ ಪಡೆಯಲು ವಿಳಂಬವಾದರೆ, ಸಂಬಂಧಿಸಿದ ಇಲಾಖೆಯು ಸೂಕ್ತ ಕಾರಣವಿಲ್ಲದೆ ಸೇವೆ ನಿರಾಕರಿಸಿದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಗ್ರಾ.ಪಂ ಕಚೇರಿಗಳ ಕಾನೂನು ಸಲಹಾ ಪೆಟ್ಟಿಗೆಯಲ್ಲಿ ದೂರು ಹಾಕಬಹುದು’ ಎಂದರು.

‘ಸಾರ್ವಜನಿಕರ ದೂರಿನ ಸಂಬಂಧ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪ್ರಾಧಿಕಾರದ ಮೂಲಕ ನಿರ್ದೇಶನ ನೀಡಿ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೂರೆಯುವಂತೆ ಕ್ರಮ ಕೈಗೊಳ್ಳುತ್ತೇವೆ. ಜನರು ಕಾನೂನು ಸಲಹಾ ಪೆಟ್ಟಿಗೆಯ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕಿನ ಹೊನ್ನೆನಹಳ್ಳಿ ಗ್ರಾ.ಪಂ, ಹಾಲು ಉತ್ಪಾದಕರ ಸಹಕಾರ ಸಂಘ, ಗಾಂಧಿನಗರ ಹಾಲು ಉತ್ಪಾದಕರ ಮಹಿಳಾ ಸ್ವಸಹಾಯ ಸಂಘ, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಯೋಗಿಕವಾಗಿ ಸಲಹಾ ಪೆಟ್ಟಿಗೆ ಅಳವಡಿಸಲಾಯಿತು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ, ವಕೀಲರಾದ ಕೆ.ಆರ್.ಧನರಾಜ್, ನಾರಾಯಣಸ್ವಾಮಿ, ಕೋಚಿಮುಲ್ ಉಪ ವ್ಯವಸ್ಥಾಪಕ ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.