ADVERTISEMENT

ಕೋಲಾರ: 1,120 ಲೀಟರ್ ಕಲಬೆರಕೆ ಹಾಲು ವಶ

ಕೋಲಾರದಲ್ಲಿ ಕಲಬೆರಕೆ ಹಾಲಿನ ದಂಧೆ, ಚಾಲಕ, ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:18 IST
Last Updated 6 ಫೆಬ್ರುವರಿ 2026, 7:18 IST
ಕೋಲಾರದಲ್ಲಿ ಕಲಬೆರಕೆ ಹಾಲು ಪತ್ತೆ ಕಾರ್ಯಾಚರಣೆ
ಕೋಲಾರದಲ್ಲಿ ಕಲಬೆರಕೆ ಹಾಲು ಪತ್ತೆ ಕಾರ್ಯಾಚರಣೆ   

ಕೋಲಾರ: ಜಿಲ್ಲೆಯಲ್ಲಿ ಖಾಸಗಿ ಹಾಲಿನ ಸಂಗ್ರಹಣಾ ಕೇಂದ್ರಗಳಲ್ಲಿ ಕಲಬೆರಕೆ ಹಾಲಿನ ದಂಧೆಯ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುರುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 1,120 ಲೀಟರ್ ಕಲಬೆರಕೆ ಹಾಲು ಜಪ್ತಿ ಮಾಡಿದೆ.

ವಾಹನದ ಚಾಲಕ ಹಾಗೂ ಮಾಲೀಕನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿ ತನಿಖೆ ನಡೆಸಲಾಗುತ್ತಿದೆ.

ಹಾಲಿಗೆ ವಿಷಕಾರಿ ಅಂಶ ಬೆರೆಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಕೇಂದ್ರಗಳ ಮೇಲೆ 30 ತಂಡಗಳಿಂದ 30 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ADVERTISEMENT

ಕಲಬೆರಕೆ ದಂಧೆ ನಡೆಯುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ರಹಸ್ಯ ಕಾರ್ಯಾಚರಣೆಗೆ ನೀಲನಕ್ಷೆ ಸಿದ್ಧಪಡಿಸಿದ್ದರು. ಅದರಂತೆ, ಗುರುವಾರ ನಸುಕಿನ 2.30ಕ್ಕೆ ಆಹಾರ ಸುರಕ್ಷತಾ ಇಲಾಖೆಯ 30 ವಿಶೇಷ ತಂಡಗಳಿಂದ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿತ್ತು.

ಆಹಾರ ಸುರಕ್ಷತಾ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಾರಾಟ ಕೇಂದ್ರ ಹಾಗೂ ಹಾಲಿನ ಉತ್ಪಾದನಾ ಘಟಕಗಳಿಗೆ ದಿಢೀರ್‌ ದಾಳಿ ನಡೆಸಿದ ಅಧಿಕಾರಿಗಳು, ಯಾವುದೇ ದಾಖಲೆಗಳಿಲ್ಲದ ಹಾಗೂ ಸಂಶಯಾಸ್ಪದವಾಗಿ ಕಂಡುಬಂದ 40 ಹಾಲಿನ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ಕೂಡಲೇ ಬೆಂಗಳೂರಿನ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ಈ ಬೃಹತ್ ಕಾರ್ಯಾಚರಣೆಯಲ್ಲಿ ಮುಳಬಾಗಿಲು ತಾಲ್ಲೂಕಿನ ಸಿ.ಕೊರವನೂರು ಗ್ರಾಮದಲ್ಲಿ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡವು, ಅಕ್ರಮವಾಗಿ ಹಾಲನ್ನು ಸಾಗಾಟ ಮಾಡುತ್ತಿದ್ದ ವಾಹನ ತಡೆದು ತಪಾಸಣೆ ನಡೆಸಿದೆ. ಈ ವೇಳೆ ವಾಹನದಲ್ಲಿ 28 ಕ್ಯಾನ್‌ಗಳಲ್ಲಿ ತುಂಬಿದ್ದ ಸುಮಾರು 1,120 ಲೀಟರ್ ಕಲಬೆರಕೆ ಹಾಲನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಹಾಲಿನ ಡೇರಿಗಳ ಮಾಲೀಕರಿಗೆ ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.  

ಕೋಲಾರ ಜಿಲ್ಲೆಯ ವಿವಿಧೆಡೆ ಹಾಲು ಸಂಗ್ರಹಣಾ ಕೇಂದ್ರದ ಮೇಲೆ ದಾಳಿ ನಡೆಸಿದ ಸಿಬ್ಬಂದಿ
ಕಲ‌ಬೆರಕೆ ಹಾಲಿನ ದಂಧೆ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡ

ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ

ಜಿಲ್ಲೆಯ ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿ ಮುಖ್ಯ. ಕಲಬೆರಕೆ ಹಾಲಿನ ದಂಧೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹಾಲಿನಲ್ಲಿ ವಿಷಕಾರಕ ಅಂಶಗಳನ್ನು ಬೆರೆಸುವುದು ಅತ್ಯಂತ ಗಂಭೀರ ಅಪರಾಧ. ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪರವಾನಗಿ ರದ್ದುಪಡಿಸುವುದಲ್ಲದೇ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.