ADVERTISEMENT

ಬಿಕ್ಕಟ್ಟಿಗೆ ಸಿಲುಕಿದ ದೇಶದ ಕೃಷಿ ವಲಯ: ಮೀನಾಕ್ಷಿ ಸುಂದರಂ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 7:29 IST
Last Updated 27 ಅಕ್ಟೋಬರ್ 2025, 7:29 IST
   

ಕೋಲಾರ: ಕೋಲಾರ ಜಿಲ್ಲೆ ಸೇರಿದಂತೆ ದೇಶದಾದ್ಯಂತ ಕೃಷಿಯು ಬಿಕ್ಕಟ್ಟಿಗೆ ಸಿಲುಕಿದೆ. ಅವೈಜ್ಞಾನಿಕ ಭೂಸ್ವಾಧೀನದಿಂದಾಗಿ ರೈತರು ಮತ್ತು ಕೃಷಿ ಕೂಲಿಕಾರರನ್ನು ಗ್ರಾಮೀಣ ಪ್ರದೇಶದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಉದ್ಯೋಗಗಳು ಸೃಷ್ಟಿಯಾಗದೇ ಇರುವ ಉದ್ಯೋಗದಲ್ಲಿಯೇ ಜೀತದಾಳುಗಳಾಗಿ ದುಡಿಯುವಂತಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಸಿಐಟಿಯು7 ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಮಿಕರು ಜೀತದಾಳುಗಳಂತಾಗಿದ್ದು, ಅಪಾಯಕಾರಿ ಕಾರ್ಮಿಕ ನೀತಿಗಳ ವಿರುದ್ಧ ಕಾರ್ಮಿಕರು ಹೋರಾಟಕ್ಕೆ ಮುಂದಾಗಬೇಕು ಎಂದರು.

ADVERTISEMENT

ಜಿಲ್ಲೆಯ ಅಭಿವೃದ್ಧಿಗೆ ಸೂಕ್ತ ಗಮನ ಕೊಡಲು ಸರ್ಕಾರ ಮುಂದಾಗಬೇಕು. ರಾಜಧಾನಿ ಸುತ್ತಮುತ್ತಲು ನಡೆಸುತ್ತಿರುವ ವ್ಯಾಪಕ ಭೂಸ್ವಾಧೀನ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಇಲ್ಲದಂತೆ ಮಾಡುತ್ತದೆ. ಕೈಗಾರಿಕೆ ಸ್ಥಾಪಿಸಲು ಕೃಷಿ ಯೋಗ್ಯ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.

ಮೋದಿ ದೇಶದಲ್ಲಿ ಅಧಿಕಾರಕ್ಕೆ ಬಂದ 11 ವರ್ಷಗಳ ಅವಧಿಯಲ್ಲಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರಿ ಖನಿಜ ಸಂಪತ್ತಿನ ಖಾಸಗೀಕರಣ, ಸರ್ಕಾರಿ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಡೆಯುತ್ತಿದೆ. ಬಂಡವಾಳದಾರರಿಗೆ ಆದ್ಯತೆ‌ ನೀಡಲಾಗುತ್ತಿದೆ ಎಂದು ದೂರಿದರು.

ಭಾರತದಲ್ಲಿ ಹೈನುಗಾರಿಕೆ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳ ಮೇಲೆ ತೀವ್ರತರ ದಾಳಿ ಆರಂಭವಾಗಿ, ಇವುಗಳ ಮೇಲೆ ಅವಲಂಬಿತವಾಗಿರುವ ಗ್ರಾಮೀಣ ಉದ್ಯೋಗ ಕುಸಿದು, ನಿರುದ್ಯೋಗ ಪ್ರಮಾಣ ಹೆಚ್ಚಳವಾಗುತ್ತಿದೆ. ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಕಾರ್ಮಿಕರ ಪ್ರಮಾಣ ಹೆಚ್ಚಳವಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಹೆಚ್ಚಾಗುತ್ತಿದೆ. ಇದರ ಆರ್ಥಿಕ ನೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದರು.

ವೇದಿಕೆಯಲ್ಲಿ ನೂತನ ಸಮಿತಿ ಪದಾಧಿಕಾರಿಗಳು ಇದ್ದರು.

ಕೋಲಾರ ಜಿಲ್ಲಾ ನೂತನ ಸಮಿತಿ ಆಯ್ಕೆ

ಅಧ್ಯಕ್ಷರಾಗಿ ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿಜಯಕೃಷ್ಣ, ಖಜಾಂಚಿಯಾಗಿ ಎಚ್.ಬಿ.ಕೃಷ್ಣಪ್ಪ, ಉಪಾಧ್ಯಕ್ಷರಾಗಿ ಗಾಂಧಿನಗರ ನಾರಾಯಣಸ್ವಾಮಿ, ಅಮರನಾರಾಯಣಪ್ಪ, ಎ.ಆರ್.ಬಾಬು, ಪಿ.ಆನಂದರಾಜ್, ಅಂಜಲಮ್ಮ, ಪಿ.ತಂಗರಾಜ್, ಕಾರ್ಯದರ್ಶಿಗಳಾಗಿ ಬಿ.ಎಲ್.ಕೇಶವರಾವ್, ಎಂ.ಜಯಲಕ್ಷ್ಮಿ, ಎಂ.ಭೀಮರಾಜ್ , ಶಿವಾನಂದ್,‌ ಎಸ್.ಡಿ.ಆನಂದ್, ಲಿಯೋರಾಜ, ಐ.ಸಿ.ವೀರಭದ್ರ, ಎನ್.ಕಲ್ಪನಾ, ವಿ.ಹರೀಶ್ ಸೇರಿದಂತೆ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ

  • ಕಾರ್ಪೋರೇಟ್ ಬಂಡವಾಳಪರ ರೂಪಿಸಿರುವ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡದಿರಲು ಒತ್ತಾಯ

  • ಇಪಿಎಪ್ ನಿವೃತ್ತಿ ವೇತನವನ್ನು ಕನಿಷ್ಠ ₹ 10 ಸಾವಿರಕ್ಕೆ ಏರಿಸಲು ಒತ್ತಾಯ

  • ಚಿನ್ನದ ಗಣಿಯನ್ನು ಪುನರ್ ಆರಂಭಿಸಬೇಕು ಮತ್ತು ಪರಿಹಾರ ಹಾಗೂ ಗಣಿ ಕಾರ್ಮಿಕರು ವಾಸ ಮಾಡುವ ಮನೆಗಳನ್ನು ಗಣಿ ಕಾರ್ಮಿಕರಿಗೆ ನೀಡಲು ಒತ್ತಾಯ

  • ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡುವುದನ್ನು ಕೈಬಿಡಲು ಒತ್ತಾಯ

  • ಕನಿಷ್ಠ ₹ 36 ಸಾವಿರ ಸಮಾನ ವೇತನಕ್ಕೆ ಒತ್ತಾಯ

  • ಗುತ್ತಿಗೆ ಪದ್ದತಿ ನಿಯಂತ್ರಣಕ್ಕಾಗಿ, ಗುತ್ತಿಗೆ ಕಾರ್ಮಿಕರ ಕಾಯಂ ಕಾನೂನಿಗೆ ಒತ್ತಾಯ

  • ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಜಾರಿ ಮಾಡಲು ಒತ್ತಾಯ

  • ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡಲು ಒತ್ತಾಯ

  • ಎಲ್ಲಾ ಸ್ಕೀಂ ನೌಕರರನ್ನು ಕಾಯಂ ಮಾಡಲು ಕೋರ್ಟ್ ತೀರ್ಪುಗಳನ್ನು ಜಾರಿ ಮಾಡಲು ಒತ್ತಾಯ

  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ನಿಧಿ ದುರುಪಯೋಗ ನಿಲ್ಲಿಸಲು ಒತ್ತಾಯ

  • ಬೆಮಲ್ ಕಾಯಂಯೇತರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ

  • ಕೋಲಾರ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಒತ್ತಾಯ

  • ಮಾಲೂರಿನ ವೆರ್ಗಾ ಆಟ್ಯಾಚ್ ಮೆಂಟ್ ಕಾರ್ಮಿಕರ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಒತ್ತಾಯಿಸಲು ಸಮ್ಮೇಳನ ನಿರ್ಣಯ ಕೈಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.