ADVERTISEMENT

ಎಚ್‌ಐವಿ ಸೋಂಕಿತರ ಬಗ್ಗೆ ಕೀಳು ಭಾವನೆ ಸಲ್ಲದು

ವಿಶ್ವ ಏಡ್ಸ್‌ ದಿನಾಚರಣೆಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಕಳವಳ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 19:45 IST
Last Updated 2 ಡಿಸೆಂಬರ್ 2019, 19:45 IST
ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೋಲಾರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.
ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೋಲಾರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.   

ಕೋಲಾರ: ‘ಎಚ್‌ಐವಿ ಸೋಂಕು ಪೀಡಿತರ ಬಗ್ಗೆ ಸಮಾಜದಲ್ಲಿ ಕೀಳು ಭಾವನೆಯಿದೆ. ಅಲ್ಲದೇ, ಅವರನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಎಚ್‌ಐವಿ ಸೋಂಕಿತರು ಸಹ ನಾಗರೀಕರು. ಆದ ಕಾರಣ ಅವರನ್ನು ಕೀಳಾಗಿ ಕಾಣಬಾರದು. ಬದಲಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಏಡ್ಸ್ ಬಗ್ಗೆ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆ ತೊಡೆದು ಹಾಕಬೇಕು. ಈ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಎಚ್‌ಐವಿ ಸೋಂಕಿತರಿಗೆ ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳ ಅರಿವು ಮೂಡಿಸಬೇಕು. ಜತೆಗೆ ಅವರಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಅಸುರಕ್ಷಿತ ಲೈಂಗಿಕತೆ, ಎಚ್‌ಐವಿ ಸೋಂಕು ತಗುಲಿರುವ ವ್ಯಕ್ತಿಗಳಿಂದ ರಕ್ತ ಪಡೆಯುವುದು, ಮಾದಕ ವಸ್ತುಗಳ ಸೇವನೆಯಿಂದ ಏಡ್ಸ್‌ ಬರುತ್ತದೆ. ಆದ ಕಾರಣ ದೃಢೀಕೃತ ರಕ್ತ ಕೇಂದ್ರಗಳಿಂದ ಮಾತ್ರ ರಕ್ತ ಪಡೆಯಬೇಕು. ರಕ್ತದಾನ ಮಾಡುವಾಗಲೂ ಎಚ್ಚರ ವಹಿಸಬೇಕು. ಎಚ್‍ಐವಿ ಸೋಂಕು ಹರಡುವ ವಿಧಾನಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಏಡ್ಸ್‌ ಗುಣಪಡಿಸಲಾಗದ ಮಾರಕ ಕಾಯಿಲೆ. ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಹಜವಾಗಿ ಲೈಂಗಿಕತೆ ಬಗ್ಗೆ ಕುತೂಹಲ ಬರುತ್ತದೆ. ಈ ಸಮಯದಲ್ಲಿ ಹಾದಿ ತಪ್ಪಿದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದೆಗೆಡುವುದು ಸ್ಪಷ್ಟ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

ಲೈಂಗಿಕ ಶಿಕ್ಷಣ: ‘ಜಾಗತಿಕವಾಗಿ ಭಾರತವು ರಕ್ಷಣೆ ಮತ್ತು ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪಿಯುಸಿ ಹಂತದ ಪಠ್ಯದಲ್ಲಿ ಲೈಂಗಿಕ ಶಿಕ್ಷಣವಿದ್ದರೆ ವಿದ್ಯಾರ್ಥಿಗಳಿಗೆ ಲೈಂಗಿಕತೆಯ ಸಾಧಕ ಬಾಧಕದ ಬಗ್ಗೆ ಅರಿವು ಬರುತ್ತದೆ. ಲೈಂಗಿಕತೆ ಬಗ್ಗೆ ಮಡಿವಂತಿಕೆ ಬಿಟ್ಟು ಮುಕ್ತ ಚರ್ಚೆ ನಡೆದರೆ ಯುವಕ ಯುವತಿಯರು ದಾರಿ ತಪ್ಪುವುದನ್ನು ತಡೆಯಬಹುದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಭಿಪ್ರಾಯಪಟ್ಟರು.

‘ಜಗತ್ತನ್ನು ಅತಿಯಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಏಡ್ಸ್ ಸಹ ಒಂದು. ಎಚ್‌ಐವಿ ಸೋಂಕು ಪೀಡಿತರು ಹಲವು ಸಂಕಟ ಅನುಭವಿಸುತ್ತಿದ್ದಾರೆ. ಎಚ್‍ಐವಿ ಸೋಂಕು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜನರು ಜೀವನದಲ್ಲಿ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಜೀವಿಸಬೇಕು. ಆ ಮೂಲಕ ಆರೋಗ್ಯವಂತ ಸಮಾಜ, ದೇಶ ಕಟ್ಟಬೇಕು’ ಎಂದು ಆಶಿಸಿದರು.

ಮಹಾಮಾರಿ: ‘ಏಡ್ಸ್‌ ಮನುಕುಲಕ್ಕೆ ಬಂದಿರುವ ಮಹಾಮಾರಿ ಕಾಯಿಲೆ. ಈ ಕಾಯಿಲೆಗೆ ಸಂಪೂರ್ಣ ಚಿಕಿತ್ಸೆಯಿಲ್ಲ. ಸೋಂಕಿಗೆ ತುತ್ತಾದವರು ಜೀವನವಿಡೀ ಮಾತ್ರೆ ಸೇವಿಸಬೇಕು. ಆದ್ದರಿಂದ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಜಗದೀಶ್ ಹೇಳಿದರು.

‘ಅಸುರಕ್ಷಿತ ಲೈಂಗಿಕತೆ, ಪರೀಕ್ಷಿಸದ ರಕ್ತ ಸರಬರಾಜು, ಸಂಸ್ಕರಿಸದ ಅಥವಾ ಉಪಯೋಗಿಸಿದ ಸಿರಂಜ್‌ನ ಬಳಕೆ ಹಾಗೂ ಸೋಂಕಿತ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಯ ಜತೆ ಸೇರುವುದರಿಂದ, ಶೌಚಾಲಯ ಬಳಕೆಯಿಂದ, ಜೊತೆಯಲ್ಲಿ ಊಟ ಮಾಡುವುದರಿಂದ ಅಥವಾ ಸೋಂಕಿತ ವ್ಯಕ್ತಿಯ ಬಟ್ಟೆ ಧರಿಸುವುದರಿಂದ ಹರಡುವುದಿಲ್ಲ’ ಎಂದು ವಿವರಿಸಿದರು.

‘ಪ್ರತಿ ಗರ್ಭಿಣಿಯು ಕಡ್ಡಾಯವಾಗಿ ಎಚ್ಐವಿ ಪರೀಕ್ಷೆ ಮಾಡಿಸಬೇಕು. ಸರ್ಕಾರ ಎಚ್‌ಐವಿ ಸೋಂಕಿತರಿಗೆ ತಿಂಗಳಿಗೆ ₹ 1 ಸಾವಿರ ಸಹಾಯಧನ ನೀಡುತ್ತದೆ. ಸೋಂಕಿತರಿಗೆ ತಾರತಮ್ಯ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ಜಾಗೃತಿ ಜಾಥಾ: ಕಾರ್ಯಕ್ರಮಕ್ಕೂ ಮುನ್ನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದ ಹಾಗೂ ನಿಯಂತ್ರಣಕ್ಕೆ ಸೇವೆ ಸಲ್ಲಿಸಿದ ಸಂಘ ಸಂಸ್ಥೆ ಪದಾಧಿಕಾರಿಗಳು, ವೈದ್ಯರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್‌, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌, ಶ್ರೀ ನರಸಿಂಹರಾಹ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಎಸ್.ಎನ್.ವಿಜಯಲಕ್ಷೀ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.