ಕೋಲಾರ: ಮುದ್ದಾದ ಮೂವರು ಮಕ್ಕಳು ಮತ್ತು ದಂಪತಿ ಖುಷಿಖುಷಿಯಿಂದ ಆ ವಿಮಾನವೇರಿದರು. ಐವರ ಮೊಗದಲ್ಲೂ ಅದೇನೋ ಖುಷಿ, ಸಂಭ್ರಮ. ಹೊಸ ಬದುಕು ಕಟ್ಟಿಕೊಳ್ಳುವ ತವಕ. ವಿಮಾನ ಟೇಕ್ ಆಫ್ ಆಗುವ ಮುನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ತಂದೆ ಆ ಫೋಟೊವನ್ನು ನೆಂಟರು ಮತ್ತು ಸ್ನೇಹಿತರಿಗೆ ಕಳುಹಿಸಿದರು. ಕೆಲವೇ ಸೆಕೆಂಡ್‌ಗಳಲ್ಲಿ ಆ ಐವರು ಸುಟ್ಟು ಬೂದಿಯಾದರು!
ಇದು ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡ ಡಾ.ಪ್ರತೀಕ್ ಜೋಶಿ ಹಾಗೂ ಅವರ ಕುಟುಂಬದ ಕಥೆ.
ಪ್ರತೀಕ್ ಜೋಶಿ ಕೋಲಾರದ ಟಮಕದಲ್ಲಿರುವ ಶ್ರೀ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ. ಅವರು 2008ರಿಂದ 2010ರಲ್ಲಿ ರೇಡಿಯಾಲಜಿಯಲ್ಲಿ ಡಿಪ್ಲೊಮಾ (ಡಿಎಂಆರ್‌ಡಿ) ಪೂರೈಸಿದ್ದರು. ಎರಡು ವರ್ಷ ಇಲ್ಲಿನ ಹಾಸ್ಟೆಲ್‌ನಲ್ಲಿ ಇದ್ದು ವ್ಯಾಸಂಗ ಮಾಡಿದ್ದರು. ಇವರು ಈಗ ವಿಭಾಗದ ಮುಖ್ಯಸ್ಥರಾಗಿರುವ ಡಾ.ಅನಿಲ್ ಸಕ್ಲೇಚ ಅವರ ವಿದ್ಯಾರ್ಥಿ ಕೂಡ.
ಈ ಅಂಗವಾಗಿ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಪ್ರತೀಕ್ ಹಾಗೂ ಅವರು ಕುಟುಂಬದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಭಾವಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲ, ಉಪಪ್ರಾಂಶುಪಾಲರು, ಶೈಕ್ಷಣಿಕ ನಿರ್ದೇಶಕರು, ರೇಡಿಯಾಲಜಿ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಮೌನಾಚರಣೆ ಬಳಿಕ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಕೋಲಾರದ ಶ್ರೀ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಡಾ.ಪ್ರತೀಕ್ ಜೋಶಿ ಹಾಗೂ ಕುಟುಂಬಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು
‘ಡಾ.ಪ್ರತೀಕ್ ಜೋಶಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ ಆಗಿದ್ದರು. ಅವರ ಹಾಗೂ ಕುಟುಂಬದವರ ಸಾವು ಬೇಸರ ತರಿಸಿದೆ’ ಎಂದು ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ವಿನೂತಾ ಶಂಕರ್ ಹೇಳಿದರು.
ಇದಕ್ಕೂ ಮೊದಲು ಪ್ರತೀಕ್ 2000–2005ರವರೆಗೆ ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು.
ರಾಜಸ್ತಾನದ ಮೂಲದ ಪ್ರತೀಕ್ ಜೋಶಿ ಕಳೆದ ನಾಲ್ಕು ವರ್ಷಗಳಿಂದ (2021ರಿಂದ) ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿನ ರಾಯಲ್ ಡರ್ಬಿ ಆಸ್ಪತ್ರೆಯಲ್ಲಿ ರೇಡಿಯಾಲಜಿ ತಜ್ಞರಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದರು. ಉದಯಪುರದಲ್ಲಿ ವೈದ್ಯರಾಗಿದ್ದ ಪತ್ನಿ ಡಾ.ಕೋಮಿ ವ್ಯಾಸ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಲಂಡನ್‌ನಲ್ಲಿ ಡಾ.ಪ್ರತೀಕ್ ಜೊತೆ ವೃತ್ತಿ ಮುಂದುವರಿಸಲು ಬಯಸಿದ್ದರು.
ಹೀಗಾಗಿ, ಹೊಸ ಭರವಸೆ, ಹೊಸ ಕನಸಿನೊಂದಿಗೆ ಈ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಗುಡ್‌ಬೈ ಹೇಳಿ ಲಂಡನ್‌ಗೆ ಹೊರಡಲು ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ ವಿಮಾನವೇರಿದ್ದರು. ಪತಿ, ಪತ್ನಿ ಒಂದು ಸಾಲಿನ ಸೀಟಿನಲ್ಲಿ, ಮತ್ತೊಂದು ಸಾಲಿನಲ್ಲಿ ಮೂವರು ಮಕ್ಕಳು ಕುಳಿತುಕೊಂಡಿದ್ದರು. ತಂದೆ ಸೆಲ್ಫಿ ಕ್ಲಿಕ್ಕಿಸಿದಾಗ ಆ ಮುದ್ದು ಮೂರು ಮಕ್ಕಳು ಮೊಗದಲ್ಲಿ ಖುಷಿಯೋ ಖುಷಿ. ಆದರೆ, ಕೆಲವೇ ಸೆಕೆಂಡ್‌ಗಳಲ್ಲಿ ಎಲ್ಲಾ ಕನಸು, ಭರವಸೆ ಕಮರಿ ಹೋದವು. ಮಕ್ಕಳಾದ ಮಿರಾಯಾ (8), ಅವಳಿ ಗಂಡು ಮಕ್ಕಳಾದ ನಕುಲ್, ಪ್ರದ್ಯುತ್ (5) ಅವರ ಬದುಕಿಗೆ ವಿಧಿ ಬ್ರೇಕ್ ಹಾಕಿತು.
ಈ ಐವರು ಸೆಲ್ಫಿ ತೆಗೆದುಕೊಳ್ಳಲು ಬಳಸಿದ ಮೊಬೈಲ್ ಕೂಡ ಅವರೊಂದಿಗೆ ಸುಟ್ಟ ಬೂದಿಯಾಗಿದೆ. ಆದರೆ, ಅವರ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಭಾವುಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಪ್ರತೀಕ್ ನನ್ನ ನೆಚ್ಚಿನ ವಿದ್ಯಾರ್ಥಿ
‘ವಿಮಾನ ಅಪಘಾತ ಕೇಳಿ ತುಂಬಾ ದುಃಖವಾಗಿತ್ತು. ನಂತರ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿದ್ದಾಗ ವೈರಲ್ ಆಗಿದ್ದ ಫೋಟೊವೊಂದು ದೊಡ್ಡ ಆಘಾತ ತಂದಿತು. ಏಕೆಂದರೆ ಅದು ನನ್ನ ನೆಚ್ಚಿನ ವಿದ್ಯಾರ್ಥಿ ಪ್ರತೀಕ್ ಜೋಶಿ ಫೋಟೊವಾಗಿತ್ತು. ಆ ಸುದ್ದಿ ಕೇಳಿ ತೀವ್ರ ಬೇಸರ ಉಂಟಾಯಿತು’ ಎಂದು ಶ್ರೀ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಅನಿಲ್ ಸಕ್ಲೇಚ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರತೀಕ್ ಅವರಿಗೆ ನಾನು ಪಾಠ ಮಾಡಿದ್ದೆ. ತುಂಬಾ ಒಳ್ಳೆಯ ಹುಡುಗ ಚೆನ್ನಾಗಿ ಓದುತ್ತಿದ್ದರು ಕೂಡ. ನಾನು ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ. ಇಂಥ ದುರಂತ ನಡೆಯಬಾರದಿತ್ತು. ಬಾಳಿ ಬದುಕಬೇಕಿದ್ದ ಅವರ ಮೂರು ಮಕ್ಕಳು ಮೃತರಾಗಿರುವುದು ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದರು.
ಕನ್ನಡ ಕಲಿಯುತ್ತಿದ್ದ ಪ್ರತೀಕ್
‘ಬೆಳಗಾವಿಯ ಜೆಎನ್‌ಎಂಸಿಯಲ್ಲಿ ಎಂಬಿಬಿಎಸ್ ಓದಿದ್ದ ಪ್ರತೀಕ್ ನಮ್ಮ ಕಾಲೇಜಿಗೆ ಬರುವಷ್ಟರಲ್ಲಿ ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಿದ್ದರು. ನಮ್ಮ ಜೊತೆಗೆ ಹಾಗೂ ಸ್ನೇಹಿತರೊಂದಿಗೆ ಕನ್ನಡದಲ್ಲೇ ಸಂಭಾಷಣೆ ನಡೆಸಲು ಪ್ರಯತ್ನಿಸುತ್ತಿದ್ದರು. ರೇಡಿಯಾಲಜಿ ವಿಭಾಗದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗಲೂ ಸಿಬ್ಬಂದಿ ಜೊತೆ ಕನ್ನಡದಲ್ಲಿ ಮಾತನಾಡಲು ಮುಂದಾಗುತ್ತಿದ್ದರು. ಕನ್ನಡ ಕಲಿಯಬೇಕೆಂಬ ಉತ್ಸಾಹ ಅವರಲ್ಲಿತ್ತು’ ಎಂದು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಸಕ್ಲೇಚ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.