ADVERTISEMENT

ಎಚ್‌ 125 ಹೆಲಿಕಾಪ್ಟರ್‌ ಜೋಡಣಾ ಘಟಕ; ಫೆ.17ಕ್ಕೆ ರಾಜನಾಥ್‌ ಸಿಂಗ್‌ ಉದ್ಘಾಟನೆ

ವೇಮಗಲ್‌ನಲ್ಲಿ ಫೆ.17ಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:19 IST
Last Updated 14 ಫೆಬ್ರುವರಿ 2026, 6:19 IST
<div class="paragraphs"><p>ರಾಜನಾಥ್‌ ಸಿಂಗ್‌</p></div>

ರಾಜನಾಥ್‌ ಸಿಂಗ್‌

   

ಕೋಲಾರ: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್ ಲಿಮಿಟೆಡ್‌ನಿಂದ (ಟಿಎಎಸ್‌ಎಲ್‌) ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕ ತಲೆ ಎತ್ತಲಿದ್ದು, ಫೆ.17ರಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸಲಿದ್ದಾರೆ.

ಈ ಸಂಬಂಧ ರಾಜನಾಥ್‌ ಸಿಂಗ್‌ ಅವರ ಪ್ರವಾಸದ ವೇಳಾಪಟ್ಟಿ ಬಂದಿದ್ದು, 17ರ ಸಂಜೆ ಭೇಟಿ ನೀಡಲಿದ್ದಾರೆ. ಅವರು ಫೆ.16ಕ್ಕೆ ಬೆಂಗಳೂರಿಗೆ ಬರಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 

ADVERTISEMENT

‘‌ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಿಎಎಸ್‌ಎಲ್‌ನಿಂದ ಈಗಾಗಲೇ ಸೌಲಭ್ಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದನ್ನು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ. ಭಾನುವಾರ ನಾನು ಸ್ಥಳ ಪರಿಶೀಲನೆ ನಡೆಸುತ್ತೇನೆ’ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಟಿಎಎಸ್‌ಎಲ್‌ನಿಂದ ರಕ್ಷಣಾ ಸಾಮಗ್ರಿ ಉತ್ಪಾದನಾ ಘಟಕವು ಸುಮಾರು 50 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ.

ಈ ಹಿಂದೆ ಈ ವಿಚಾರವನ್ನು ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

‘ಕರ್ನಾಟಕ ರಾಜ್ಯವು ಆಂಧ್ರ ಪ್ರದೇಶ, ಗುಜರಾತ್, ಉತ್ತರ ಪ್ರದೇಶ ಹಿಂದಿಕ್ಕಿ ಈ ಅವಕಾಶ ಗಿಟ್ಟಿಸಿಕೊಂಡಿದೆ. ಏರೋಸ್ಪೇಸ್‌ ತಯಾರಿಕಾ ಕ್ಷೇತ್ರದಲ್ಲಿ ಈ ಮೂಲಕ ರಾಜ್ಯದ ಪಾರಮ್ಯ ಮುಂದುವರಿದಿದೆ. ಏರೋಸ್ಪೇಸ್‌ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಶೇ 65ರಷ್ಟು ಕೊಡುಗೆಯೊಂದಿಗೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ಇಂಥ ನಾಲ್ಕು ಅಸೆಂಬ್ಲಿ ಘಟಕಗಳು ಮಾತ್ರ ಇವೆ. ಅದರಲ್ಲಿ ಕರ್ನಾಟಕವೂ ಸ್ಥಾನ ಪಡೆದಿದೆ. ಈ ಕ್ಷೇತ್ರದಲ್ಲಿ ಕರ್ನಾಟಕ ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಲಿದೆ. ಮತ್ತಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ತಯಾರಿಕಾ ಕ್ಷೇತ್ರದಲ್ಲಿ ಮತ್ತಷ್ಟು ಸಾಮರ್ಥ್ಯ ಹೆಚ್ಚಿಸಲಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.