ADVERTISEMENT

ಅಂಬೇಡ್ಕರ್ ದೇಶದ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 15:18 IST
Last Updated 7 ಡಿಸೆಂಬರ್ 2021, 15:18 IST
ವೇಮಗಲ್‌ ಸಮೀಪದ ಚೊಕ್ಕಪುರ ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು
ವೇಮಗಲ್‌ ಸಮೀಪದ ಚೊಕ್ಕಪುರ ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು   

ವೇಮಗಲ್‌: ‘ಅಂಬೇಡ್ಕರ್ ಪ್ರಜಾಪ್ರಭುತ್ವದ ತಂದೆ. ಅವರ ಬರಹ ಹಾಗೂ ವಿಚಾರಧಾರೆಯ ಪುಸ್ತಕಗಳು ಮನೆ ಮನೆಯಲ್ಲೂ ಇರಬೇಕು. ಅವರ ಕನಸು ನನಸು ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ದಲಿತ ಮುಖಂಡ ಮುನಿಆಂಜಿನಪ್ಪ ಹೇಳಿದರು.

ಚೊಕ್ಕಪುರ ಗ್ರಾಮದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಅಂಬೇಡ್ಕರ್ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರ ರಚಿಸಿದ ದೇಶದ ಸಂವಿಧಾನವು ಜಗತ್ತಿನಲ್ಲೇ ಉತ್ತಮ ಮತ್ತು ಪ್ರಸ್ತುತವಾದ ಸಂವಿಧಾನವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಶೋಷಿತರ ಭವಿಷ್ಯ ಉಜ್ವಲಗೊಳಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೇಶದ ಆಶಾಕಿರಣ. ಶೋಷಿತರ ಪರ ಧ್ವನಿಯಾಗಿ ಹೊರಹೊಮ್ಮಿದ ಮಹಾನ್‌ ಚೇತನ. ಅಪರೂಪದ ವ್ಯಕ್ತಿತ್ವ ಹಾಗೂ ಸರಸ್ವತಿ ಸಂಪತ್ತು ಹೊಂದಿದ್ದ ಅಂಬೇಡ್ಕರ್‌ ದೇಶದಲ್ಲಿ ಜನಿಸದಿದ್ದರೆ ದಲಿತರು ನಿರ್ಭಯವಾಗಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ಜಗತ್ತಿನಲ್ಲಿ ಅಂಬೇಡ್ಕರ್‌ ಹೆಸರು ಎಲ್ಲರಿಗೂ ಚಿರಪರಿಚಿತ. ದೇಶದ ಅಸ್ತಿತ್ವ ಇರುವವರೆಗೂ ಅವರ ಹೆಸರು ಪ್ರಚಲಿತ’ ಎಂದರು.

ADVERTISEMENT

‘ಸಂವಿಧಾನ ಗೌರವಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಭಾರತದಂತಹ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಸಂವಿಧಾನದ ಆಶಯ ಮಹತ್ವದ್ದು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪರಿಶ್ರಮದ ಬಗ್ಗೆ ಇಡೀ ದಿನ ಮಾತನಾಡಿದರೂ ಸಾಲದು. ಅಂಬೇಡ್ಕರ್ ದೌರ್ಜನ್ಯಕ್ಕೆ ಒಳಗಾದವರಿಗೆ ಮತ್ತು ಅವಮಾನ ಅನುಭವಿಸಿದವರ ಪರವಾಗಿ ದೊಡ್ಡ ಕ್ರಾಂತಿ ಮಾಡಿ ಸಮಾನತೆಯ ಅರಿವು ಮೂಡಿಸಿದರು’ ಎಂದು ಹೇಳಿದರು.

ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಸೂಲೂರು ಗ್ರಾ.ಪಂ ಮಾಜಿ ಸದಸ್ಯ ಮುನಿಯಪ್ಪ, ಗ್ರಾಮಸ್ಥರಾದ ರಾಮಣ್ಣ, ಮುನಿರೆಡ್ಡಿ. ನಾಗೇಶ್, ಮುನಿಶಾಮಪ್ಪ, ಹನುಮಂತಣ್ಣ, ಗಣೇಶ್, ವೆಂಕಟೇಶ್, ರಾಮು, ಆಂಜಿಕುಮಾರ್, ಚೌಡಪ್ಪ, ಅಶೋಕ್, ನಾಗರಾಜ್, ರವಿಕುಮಾರ್, ಸುರೇಶ್, ಗಂಗಾಧರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.